ಬೆಂಗಳೂರು : ಹಿಂದಿನ ಸರ್ಕಾರದ ಆಡಳಿತವಿದ್ದಾಗ ನಡೆದಿದೆ ಎನ್ನಲಾಗಿದ್ದ ಹಾಗೂ ರಾಜ್ಯ ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಬಹುಕೋಟಿ ವಂಚನೆಯ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದೆ. 2020ರಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅಮೆರಿಕದ ಬಿಟಿಸಿ ಇ ಡಾಟ್ ಕಾಮ್ ಜಾಲತಾಣ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ 3000 ಬಿಟ್ ಕಾಯಿನ್ ಗಳಿಸಿದ್ದ. ಇಬ್ಬರು ವಿದೇಶಿ ಹ್ಯಾಕರ್ಸ್ ಗಳ ಜೊತೆ ಸೇರಿ ಬಿಟ್ ಫೀನಿಕ್ಸ್ ಜಾಲತಾಣ ಹ್ಯಾಕ್ ಮಾಡಿ 2000 ಸಾವಿರ ಬಿಟ್ ಕಾಯಿನ್ ಗಳಿಸಿಕೊಂಡಿದ್ದ. ಈ ಎರಡು ಜಾಲತಾಣಗಳನ್ನು ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್ ಮಾರುಕಟ್ಟೆ ಮೌಲ್ಯ 1254 ಕೋಟಿಯದ್ದಾಗಿದೆ ಎಂದು ದೋಷಾರೋಪ ಪಟ್ಟಿ ಉಲ್ಲೇಖವಾಗಿತ್ತು. ಸದ್ಯ ಎಸ್ಐಟಿ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ತಂಡವು ಸಿಸಿಬಿ ಬೇಧಿಸಲಾಗದ ಬಿಟ್ ಕಾಯಿನ್ ಹಗರಣವನ್ನು ಭೇದಿಸಲು ಸನ್ನದ್ಧವಾಗಿದೆ. ಈ ಸಂಬಂಧ ಸಿಸಿಬಿ ಬಳಿ ಇರುವ ತನಿಖಾ ಕಡತಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸಮಗ್ರ ತನಿಖಾ ಮಾಹಿತಿಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ ಬಳಿಕ ಯಾವ ರೀತಿ ತನಿಖೆ ನಡೆಸಬೇಕು ? ಎಷ್ಟು ಮಂದಿ ತಾಂತ್ರಿಕ ಸಿಬ್ಬಂದಿ ಅವಶ್ಯಕತೆ ಇದೆ ಎಂಬುವುದು ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಅರಿತು ತನಿಖೆ ಪ್ರಬಲಗೊಳಿಸಲಾಗುವುದು ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇ-ಪ್ರೊಕ್ಯೂರ್ ಮೆಂಟ್ ಜಾಲತಾಣ ಹ್ಯಾಕ್ ಮಾಡಿದ್ದ ಶ್ರೀಕಿಯ ವಿಚಾರಣೆ ನಡೆಸಿ ಸಿಐಡಿ ಕೋರ್ಟ್ ಗೆ ವರದಿ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ (ಪಿಎಂಎಲ್ ಎ) ಶ್ರೀಕಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ಎರಡು ಸಂಸ್ಥೆಗಳಿಂದ ಇನ್ನಷ್ಟೇ ತನಿಖಾ ಮಾಹಿತಿ ಪಡೆಯಬೇಕಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ಆಯಾಮಗಳಿಂದಲೂ ಸಮಗ್ರವಾಗಿ ಪರಿಶೀಲಿಸಿ ತನಿಖೆ ಚುರುಕುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಕಿ ಎಲ್ಲಿದ್ದಾನೆ ? : ಸಂಪೂರ್ಣ ಅಧ್ಯಯನ ಬಳಿಕ ಮೊದಲನೆದಾಗಿ ಪ್ರಕರಣ ಪ್ರಮುಖ ರೂವಾರಿ ಶ್ರೀಕೃಷ್ಣ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಸದ್ಯ ಶ್ರೀಕಿ ಎಲ್ಲಿದ್ದಾನೆ ಎಂಬುವುದು ನಿಗೂಢವಾಗಿದೆ. ಜಯನಗರದಲ್ಲಿ ಈತನ ಮನೆಯಿದ್ದು, ಈತನ ಪೋಷಕರು ಅಲ್ಲಿ ನೆಲೆಸಿದ್ದಾರೆ. ಇವರಿಗೂ ಶ್ರೀಕಿ ಎಲ್ಲಿದ್ದಾನೆ ಎಂಬುವುದು ಗೊತ್ತಿಲ್ಲ. ಈತ ಮೊಬೈಲ್ ಬಳಸದಿರುವುದು ಎಸ್ಐಟಿಗೆ ತಲೆನೋವಾಗಿ ಪರಿಣಮಿಸಿದೆ.
ಮೂರು ತಿಂಗಳ ಹೊಟೇಲ್ ವಾಸ್ತವ್ಯಕ್ಕೆ 25 ಲಕ್ಷ ಬಿಲ್ : ಡ್ರಗ್ಸ್ ವ್ಯಾಮೋಹಕ್ಕೆ ಬಿದ್ದು ಹ್ಯಾಕ್ ಮಾಡುವುದರಲ್ಲಿ ಪರಿಣಿತನಾಗಿದ್ದ ಶ್ರೀಕಿ ಐಷಾರಾಮಿ ಜೀವನ ನಡೆಸುತ್ತಿದ್ದ. ಸ್ಟಾರ್ ಹೊಟೇಲ್ ಗಳಲ್ಲಿ ಮೂರು ವರ್ಷಗಳ ಕಾಲ ವಾಸವಾಗಿದ್ದ. ಒಂದೇ ಹೊಟೇಲ್ಗೆ ಹೋದರೆ ಕನಿಷ್ಠ ಮೂರು ತಿಂಗಳ ಕಾಲ ವಾಸ್ತವ್ಯ ಹೂಡುತ್ತಿದ್ದ.
ಹೊಟೇಲ್ ರೂಮ್ ಬಾಡಿಗೆ, ಊಟದ ಬಿಲ್ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ದಾಖಲೆ ದೊರೆತಿದೆ. ಯಾವುದೇ ಹೋಟೆಲ್ ಗೆ ಹೋದರೂ ಶ್ರೀಕಿ ಆನ್ ಲೈನ್ ಮೂಲಕವೇ ಬಿಲ್ ಕಟ್ಟುತ್ತಿದ್ದ. 2019 ರ ಮೇ ನಿಂದ ಜುಲೈವರೆಗೂ ಮೂರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಪಾವತಿ ಮಾಡಿದ್ದಾನೆ. ಮೂರು ತಿಂಗಳಿಗೆ ಶ್ರೀಕಿ ಖರ್ಚು ಮಾಡಿರುವ ಹಣ 25 ಲಕ್ಷ 54 ಸಾವಿರ ಹೀಗೆ ಮೂರು ವರ್ಷಕ್ಕೆ ಸರಾಸರಿ ತಗೊಂಡ್ರೆ 7 ಕೋಟಿಗೂ ಅಧಿಕ ಮೊತ್ತದ ಹಣವನ್ನು ಶ್ರೀಕಿ ಹೋಟೆಲ್ ಗೆ ಸುರಿದಿದ್ದಾನೆ.
ಇದನ್ನೂ ಓದಿ : Bitcoin Case: ವದಂತಿಗೆ ತೆರೆ ಎಳೆಯುವ ರೀತಿ ಪೊಲೀಸರಿಂದ ಮಾಧ್ಯಮ ಪ್ರಕಟಣೆ