ಬೆಂಗಳೂರು: ದಿವಂಗತ ಎಸ್.ಆರ್. ಬೊಮ್ಮಾಯಿಯವರು ಕರ್ನಾಟಕವನ್ನು ಪರ್ಯಾಯ ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಮಾಡಿ ಯಶಸ್ವಿಯಾದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಗಂಗಮ್ಮಾ ಸೋಮಪ್ಪ ಬೊಮ್ಮಾಯಿ ಎಜುಕೇಶನಲ್ ಮತ್ತು ವೆಲ್ ಫೇರ್ ಫೌಂಡೇಶನ್ ವತಿಯಿಂದ ಮಂಗಳವಾರ ಗಾಂಧಿಭವನದಲ್ಲಿ ಏರ್ಪಡಿಸಿದ್ದ ದಿ. ಎಸ್.ಆರ್. ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಆಚರಣೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಆರ್. ಬೊಮ್ಮಾಯಿಯವರು ವಿದ್ಯಾರ್ಥಿಯಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಏಕೀಕರಣ, ಚಲೇಜಾವ್ ಚಳುವಳಿ, ಗೇಣಿದಾರರ ಪರ ಹೋರಾಟ ಮಾಡಿದ್ದರು. ಜನರ ಅಧಿಕಾರವನ್ನು ಜನರಿಗೆ ವಹಿಸುವ ತೀರ್ಮಾನ ಐತಿಹಾಸಿಕವಾಗಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಅವರ ತಂದೆಯ ರೀತಿ ಅಧಿಕಾರ ನಡೆಸಿ, ನೀರಾವರಿ ಸಚಿವರಾಗಿ ರಾಜ್ಯದ ಹಿತಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡಿದ್ದಾರೆ. ಜನ ನಾಯಕರಾಗಿ ಬೊಮ್ಮಾಯಿ ತೆಗೆದುಕೊಂಡ ತೀರ್ಮಾನವನ್ನು ರಾಜ್ಯದ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಎಸ್.ಆರ್. ಬೊಮ್ಮಾಯಿ ಅವರ ಕುರಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಎಸ್.ಆರ್. ಬೊಮ್ಮಾಯಿಯವರು ರಾಜಕಾರಣ ಮಾಡುವ ಕಾಲಘಟ್ಟ ಹಿಂತಿರುಗಿ ನೋಡಿದಾಗ ಅವರು ಮಾಡಿದ ಹೋರಾಟ ಅವರ ಪರವಾಗಿ ಆಗಿದ್ದು ಒಂದು ವಿಸ್ಮಯ. ಅಲ್ಲಿಯವರೆಗೂ ರಾಜ್ಯಪಾಲರು ಎಲ್ಲ ವಿಧವಾದ ಆಟವಾಡುತ್ತಿದ್ದರು. ನಾನು ಅನೇಕ ಉದಾಹರಣೆಗಳನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಕೆಲವು ಹಳೆಯ ಘಟನಾವಳಿಗಳನ್ನು ನೆನಪು ಮಾಡಿಕೊಂಡರು.
ಹಣದ ಪ್ರಭಾವ ಹೆಚ್ಚುತ್ತಿದೆ: ಈಗಿನ ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವ ಕೆಲಸ ಮಾಡಬೇಕಿದೆ. ನಾವು ದಾರಿ ತಪ್ಪುತ್ತಿದ್ದೇವೆ. ಅದಕ್ಕೆ ನಿಯಂತ್ರಣ ಹಾಕಬೇಕಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ರಾಜಕೀಯ ವಾಗಿ ಬೆಳೆದಿದ್ದರೆ ರಾಮಕೃಷ್ಣ ಹೆಗಡೆ, ದೇವೇಗೌಡರು ಮತ್ತು ಬೊಮ್ಮಾಯಿಯವರು ಕಾರಣ. ನಾನು, ಸಿಂದ್ಯಾ, ಜೀವರಾಜ ಎಲ್ಲರೂ ಯುವಕರು. ಎಸ್.ಆರ್. ಬೊಮ್ಮಾಯಿಯವರಲ್ಲಿ ಶಿಸ್ತು ಇತ್ತು. ನಾವು ಈ ಮಟ್ಟಕ್ಕೆ ಬರಲು ಇವರೆಲ್ಲರೂ ಕಾರಣರು ಎಂದರು. ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ 16 ಜನ ಸಚಿವರನ್ನು ಕೈ ಬಿಟ್ಟರು. ಬೊಮ್ಮಾಯಿಯವರಿಗೆ ನನ್ನ ಮೇಲೆ ಬಹಳ ಪ್ರೀತಿ, ಅವರ ಬಳಿ ಹೋಗಿ ಕೇಳಿದೆ. ಅವರು ರಾಮಕೃಷ್ಣ ಹೆಗಡೆ ಅವರ ಬಳಿ ಕಳಿಸಿದರು. ಅವರ ಬಳಿ ಹೋಗಿ ಕೇಳಿದಾಗ ಜಿಲ್ಲಾ ಪಂಚಾಯತಿ ಚುನಾವಣೆ ಗೆದ್ದು ಬನ್ನಿ ಆಗ ಪ್ರಶ್ನೆ ಕೇಳಿ ಅಂದರು, ನಾವು ಚುನಾವಣೆ ಗೆದ್ದು ಬಂದೆವು ನಮಗೆ ಸಂಪುಟ ಸಚಿವರನ್ನಾಗಿ ಮಾಡಿದರು. ಆಗ ಸಂಪುಟದಲ್ಲಿ ಸಚಿವರಾಗುವುದು ಬಹಳ ಕಷ್ಟ ಇತ್ತು ಎಂದು ಹಳೆಯ ದಿನಗಳನ್ನು ನೆನೆದರು.
ಕಾರ್ಯಕ್ರಮದಲ್ಲಿ ತಂದೆಯ ಸರಳತೆ ಮತ್ತು ಜೀವನ ನಡೆಸಿದ ಬಗೆಯನ್ನು ನೆನೆದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ತಂದೆಯವರು ಶಾಲೆಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ, ಊಟ ಮಾಡುವಾಗ ಮಕ್ಕಳಿಗೆ ಸಮಾನತೆಯ ಪಾಠ ಮಾಡುತ್ತಿದ್ದದ್ದನ್ನು ನೆನೆದು ಕಣ್ಣೀರು ಹಾಕಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪದ್ಮ ವಿಭೂಷಣ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮತ್ತು ಎಸ್.ಆರ್. ಬೊಮ್ಮಾಯಿ ಗಾಡ್ ಫಾಧರ್ ಇಲ್ಲದೆ ರಾಜಕೀಯದಲ್ಲಿ ಬೆಳೆದವರು, ಅವರು ಹೋರಾಟದ ಮೂಲಕ ಜನರ ಮನದಲ್ಲಿ ಉಳಿದವರು ಎಂದು ಬೊಮ್ಮಾಯಿ ಹೇಳಿದರು.
ಎಸ್.ಆರ್. ಬೊಮ್ಮಾಯಿಯವರ ಕಾಲದಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳು ಈಗಿನ ಕಾಲಘಟ್ಟದಲ್ಲಿ ಪ್ರಸ್ತುತ ಇರದಿರಬಹುದು. ಆದರೆ, ಆಗಿನ ಸಂದರ್ಭದಲ್ಲಿ ಅವುಗಳ ಪ್ರಾಮುಖ್ಯತೆ ಬೇರೆಯೇ ಇತ್ತು ಎಂದು ತಂದೆಯ ಆಡಳಿತದ ಶೈಲಿಯನ್ನು ಬೊಮ್ಮಾಯಿ ನೆನೆದರು.
ಅವರು ದೊಡ್ಡ ವಕೀಲರಾಗಿದ್ದರೂ ಎಲ್ಲೂ ದೊಡ್ಡಸ್ತಿಕೆ ತೋರಲಿಲ್ಲ. ಜನ ಸೇವೆಯಲ್ಲೇ ಸಾರ್ಥಕತೆಯನ್ನು ಕಂಡರು. ರಾಜಕೀಯದಲ್ಲಿ ತಾವು ನಂಬಿದ ಸಿದ್ಧಾಂತಗಳಲ್ಲಿ ರಾಜಿಯಾಗಿದ್ದರೆ ಇನ್ನೂ ಅಧಿಕಾರ ಅನುಭವಿಸಬಹುದಿತ್ತು. ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಬಂದಾಗ, ನಾನೂ ಈಗಾಗಲೇ ಕುರ್ಚಿ ಹತ್ತಿ ಇಳಿದ್ದೇನೆ ಮತ್ತೆ ಆ ಹುದ್ದೆ ಬೇಡ ಅಂತ ತಿರಸ್ಕರಿಸಿದ್ದರು ಎಂದರು.
ನನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಅವರನ್ನು ತಂದೆ ಸ್ಥಾನದಲ್ಲಿ, ಗುರುವಿನ ಸ್ಥಾನದಲ್ಲಿ ನೋಡುತ್ತೇನೆ. ರಾಜಕೀಯವಾಗಿ ನನ್ನನ್ನು ಕೈ ಹಿಡಿದುಕೊಂಡು ಬಂದು ಅವಕಾಶ ನೀಡಿ ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿದರು ಎಂದು ಹೇಳಿದರು.
ಎಸ್.ಆರ್. ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ವರ್ಷ ಆಚರಿಸಲು ತೀರ್ಮಾನ ಮಾಡಿದ್ದೇವೆ. ನಮ್ಮ ತಂದೆಯವರ ಹುಟ್ಟೂರು, ಹುಬ್ಬಳ್ಳಿ, ಬೆಂಗಳೂರು, ದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಘೋಷಿಸಿದವರು ಯಾರು: ಹೆಚ್ಡಿಕೆ ಪ್ರಶ್ನೆ