ಬೆಂಗಳೂರು : ನಗರದಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಿದ್ದು ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬಹುತೇಕ ರಸ್ತೆಗಳು ಒನ್ ವೇ ಆಗಿ ಪರಿವರ್ತನೆ ಮಾಡಲಾಗಿದೆ.
ಇಲ್ಲಿನ ರಸ್ತೆಯೊಂದರಲ್ಲಿ ಏಕಮುಖವಾಗಿ ಬರುವ ವಾಹನಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಅಪ್ಲೋಡ್ ಮಾಡಿ ಫೈನ್ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಾಂಧಿನಗರದ ಅಣ್ಣಮ್ಮ ದೇವಿ ರಸ್ತೆ ಹಾಗೂ ಆನಂದ್ ರಾವ್ ವೃತ್ತದ ಬಳಿ ಉಪ್ಪಾರಪೇಟೆ ಪೊಲೀಸರು ಏಕಮುಖ ರಸ್ತೆಗಳಲ್ಲಿ ಬರುವ ವಾಹನಗಳನ್ನು ಗುರಿಯಾಗಿಸಿಕೊಂಡು ಸಂಚಾರಿ ಪೊಲೀಸರು ತಮ್ಮ ಮೊಬೈಲ್ನಲ್ಲಿ ಗಾಡಿ ಸಂಖ್ಯೆಗಳನ್ನು ಸೆರೆ ಹಿಡಿದು ಅಪ್ಲೋಡ್ ಮಾಡುತ್ತಿದ್ದಾರೆ.
ಈ ಬಗ್ಗೆ ಸವಾರರು ಪ್ರಶ್ನಿಸಿದರೆ, ಎಲ್ಲರಿಗೂ ಒನ್ ವೇ ಎಂದು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲರಿಗೂ ಗೊತ್ತಾಗಲಿ ಎಂಬ ಕಾರಣಕ್ಕೆ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
'ಕೊರೊನಾ ಲಾಕ್ಡೌನ್ನಿಂದಾಗಿ ಜನರ ಜೀವನ ದುಸ್ತರವಾಗಿದೆ. ಕೈಯಲ್ಲಿ ಕಾಸಿಲ್ಲದೆ ಎರಡು ಹೊತ್ತಿನ ಊಟಕ್ಕಾಗಿ ಪರದಾಡಬೇಕಾದ ಸನ್ನಿವೇಶ ಉಂಟಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಅಗತ್ಯ ಸೇವೆಗಳಿಗಾಗಿ ಅನುಮತಿ ನೀಡದ್ದಕ್ಕಾಗಿ ಓಡಾಡುತ್ತಿದ್ದೇವೆ.
ಮಾಲ್, ಚಿತ್ರಮಂದಿರ ಏನು ಓಪನ್ ಆಗಿದೆಯಾ ? ಸುಖಾಸುಮ್ಮನೆ ಓಡಾಡುವುದಕ್ಕೆ' ಎಂದು ಬೈಕ್ ಸವಾರ ಬಾಬು ಅಸಮಾಧಾನ ವ್ಯಕ್ತಪಡಿಸುತ್ತಾರೆ. 'ಪೊಲೀಸರೇ ಬ್ಯಾರಿಕೇಡ್ ಹಾಕಿ ಒನ್ ವೇ ರೋಡ್ ಗಳಾಗಿ ಪರಿವರ್ತಿಸಿದ್ದರಿಂದ ಅನಿವಾರ್ಯವಾಗಿ ಏಕಮುಖ ಸಂಚಾರ ಮಾಡಲೇಬೇಕಾಗುತ್ತದೆ.
ಇದನ್ನೇ ಸಂಚಾರಿ ನಿಯಮ ಉಲ್ಲಂಘನೆ ಎಂದು ಪರಿಗಣಿಸುವುದು ಎಷ್ಟು ಸರಿ?. ಈ ಹಿಂದೆ ಬೈಕ್‌ನಲ್ಲಿ ಓಡಾಡಿದಕ್ಕೆ ಎರಡು ಬಾರಿ ಮೊಬೈಲ್ ನಲ್ಲಿ ಪೋಟೊ ಹಿಡಿದು ಅಪ್ ಲೋಡ್ ಮಾಡಿ ದಂಡ ವಿಧಿಸಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಪೊಲೀಸರ ಅಮಾನವೀಯತೆ ವರ್ತನೆ ಸರಿಯಲ್ಲ' ಎಂದು ಯುವತಿಯೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ.
ಪೋಟೋ ಹಿಡಿದು ಅಪ್ಲೋಡ್ ಮಾಡುತ್ತಿರುವ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಒನ್ ವೇ ಗಳಾಗಿ ಪರಿವರ್ತಿಸಿರುವ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿಲ್ಲ. ಈ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು ಎಂದರು.
ಓದಿ: ಹಸಿದವರಿಗೆ ಆಹಾರದ ಕಿಟ್ ನೀಡಿ.. ಲಾಠಿ ಏಟನ್ನಲ್ಲ: ಸರ್ಕಾರ ನಡೆಗೆ ಖಂಡ್ರೆ ಖಂಡನೆ