ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆಯಲ್ಲಿ ಮಾಂಗಲ್ಯ, ಕಾಲುಂಗುರ, ಬಳೆ ತೆಗಿಸಿದ್ದಾರೆ. ಆದರೆ ಬುರ್ಕಾ, ಹಿಜಾಬ್ ಹಾಕಿ ಪರೀಕ್ಷೆ ಬರೆಯೋಕೆ ಅವಕಾಶ ನೀಡಿದ್ದಾರೆ. ಬಳೆ, ತಾಳಿ, ಕಾಲುಂಗುರದಿಂದ ಹೇಗೆ ಮೋಸ ಮಾಡೋಕೆ ಸಾಧ್ಯ? ಹಿಜಾಬ್, ಬುರ್ಕಾದಿಂದ ಪರೀಕ್ಷೆಯಲ್ಲಿ ಅಕ್ರಮ ಮಾಡಬಹುದೋ ಅಥವಾ ತಾಳಿ, ಬಳೆಯಿಂದ ಪರೀಕ್ಷಾ ಅಕ್ರಮ ಸಾಧ್ಯವೋ? ಇದು ನಮ್ಮ ಸಂಸ್ಕೃತಿ ವಿರೋಧಿ ಸರ್ಕಾರ. ಇದು ಸಂವಿಧಾನದ ವಿರೋಧಿ ನಡೆ, ಹಿಂದೂ ಮಹಿಳೆಯರ ಸುಮಂಗಲಿತನ ಕಿತ್ತುಕೊಳ್ಳುವ ಕಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಹಿಳೆಯರ ಪರಿಸ್ಥಿತಿ, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ತಾನು ಹೋದದ್ದೇ ದಾರಿ ಎಂಬ ಉದ್ಧಟತನದ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರವನ್ನು ನಾವು ಬೇರೆಲ್ಲೂ ಕಾಣಲಿಲ್ಲ. ಇದೊಂದು ರಾಕ್ಷಸ ಸರ್ಕಾರ ಎಂದು ಹೇಳಿದರೂ ತಪ್ಪಾಗಲಾರದು ಎಂದು ಟೀಕಿಸಿದರು. ಈ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಮಹಿಳಾ ಮೋರ್ಚಾ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಇಡೀ ಪ್ರಪಂಚವೇ ವಿಮಾನ ನಿಲ್ದಾಣಗಳಲ್ಲಿ ತಾಳಿ ಸರ, ಕಾಲುಂಗುರಗಳನ್ನು ಗೌರವಿಸುತ್ತದೆ. ತಾಳಿ ತೆಗಿಸಿರುವ ಉದಾಹರಣೆ ಇಲ್ಲ. ನಮ್ಮ ಕರ್ನಾಟಕದಲ್ಲಿ ಈ ರೀತಿ ಮಾಡುವುದನ್ನು ನೋಡಿದರೆ ಬೇಸರ ಪಡಬೇಕೇ ಅಥವಾ ಅಸಹ್ಯ ಪಡಬೇಕೇ ಎಂದು ಗೊತ್ತಾಗಿಲ್ಲ. ಕಲಬುರಗಿಯಲ್ಲಿ ಇದು ನಡೆದಿದೆ. ಮಹಿಳೆಯರು ಮಂಚ ಹತ್ತಿದರೆ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಕಾಂಗ್ರೆಸ್ ಮಹಾನ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದರು ಎಂದು ಉಲ್ಲೇಖಿಸಿದ ಭಾರತಿ ಶೆಟ್ಟಿ, ಮಹಿಳೆಯರನ್ನು ಸೌಂದರ್ಯದ ಮೇಲೆ ಅಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ ಆಡಳಿತ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಎಂದರೆ ಸೌಂದರ್ಯ ಸ್ಪರ್ಧೆಯಲ್ಲ. ಅದು ಸಿದ್ಧಾಂತಗಳ, ಪ್ರಣಾಳಿಕೆಗಳ ನಡುವಿನ ಸ್ಪರ್ಧೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದರು. ಕಾಂಗ್ರೆಸ್ಸಿಗರು ಅತ್ಯಂತ ಉನ್ನತ ಸ್ಥಾನ ಪಡೆದ ಈಗಿನ ರಾಷ್ಟ್ರಪತಿಯವರನ್ನು ರಾಷ್ಟ್ರಪತ್ನಿ ಎಂದು ಲೇವಡಿ ಮಾಡಿದವರು. ಗ್ರಾಮೀಣ ಪ್ರದೇಶದ, ಹಿಂದುಳಿದ ಮಹಿಳೆಯನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಸುಧಾಕರನ್ ಅವರು ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಅವಮಾನ ಮಾಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತ ಬಂದಿದೆ ಎಂದು ದೂರಿದರು.
ಈ ಸರ್ಕಾರವು ಕರ್ನಾಟಕದ ಹಿಂದೂ ಮಹಿಳೆಯರಿಗೆ ದೊಡ್ಡ ನೋವು ಕೊಟ್ಟಿದೆ. ನಿಮ್ಮ ಮನೆಯಲ್ಲಿ ತಾಳಿ ಸರ, ಮಾಂಗಲ್ಯ ತೆಗೆಯಲು ಮಹಿಳೆಯರು ಒಪ್ಪುತ್ತಾರಾ ಎಂದು ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದರು. ಭಾಗ್ಯಗಳನ್ನು ಎಷ್ಟು ಕೊಟ್ಟಿದ್ದೀರಾ ಬಿಟ್ಟಿದ್ದೀರಾ ಎಂದು ನಿಮ್ಮ ಇತಿಹಾಸ ನೋಡಿದರೆ ತಿಳಿಯುತ್ತದೆ. ಭಾಗ್ಯಗಳನ್ನು ಶೇ 10- 20 ಕೊಡುವಷ್ಟರ ಮಟ್ಟಕ್ಕೂ ನೀವಿನ್ನೂ ಬಂದಿಲ್ಲ. ಆದರೆ ಎಲ್ಲ ಭಾಗ್ಯ ಕೊಟ್ಟ ಬಗ್ಗೆ ಮಾತನಾಡುತ್ತೀರಿ. ಇನ್ನೊಂದೆಡೆ ಸುಮಂಗಲಿತನ ತೆಗೆಸುವ ಕೆಲಸ ನಡೆದಿದೆ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ : ಕೆಇಎ ಪರೀಕ್ಷೆ ಅಕ್ರಮದ ಆರೋಪಿ ಆರ್ ಡಿ ಪಾಟೀಲ್ ಬಂಧನಕ್ಕೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ