ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಭಾರತ ಗೌರವ್ ಕಾಶಿ ದರ್ಶನದಡಿ ಪ್ರವಾಸವನ್ನು ರದ್ದುಪಡಿಸಲಾಗಿದೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಮಾಹಿತಿ ನೀಡಿದೆ. ಮಾರ್ಚ್ 24 ರಂದು ನಡೆದ ಸಭೆಯಲ್ಲಿ ಭಾರತ್ ಗೌರವ್ ಕಾಶಿ ದರ್ಶನ ಯೋಜನೆ ಅಡಿಯಲ್ಲಿ ವಾರಣಾಸಿ-ಅಯೋಧ್ಯೆ -ಪ್ರಯಾಗ್‌ರಾಜ್‌ಗೆ ಎಪ್ರಿಲ್-14 ಮತ್ತು ಎಪ್ರಿಲ್-28 ರಂದು ಪ್ರವಾಸ ಹೊರಡಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಮಾರ್ಚ್-25 ರಿಂದ ಆನ್ ಲೈನ್ ಮೂಲಕ ಸೀಟುಗಳನ್ನು IRCTC ಮೂಲಕ ಕಾಯ್ದಿರಿಸಲು ಪ್ರರಾಂಭಿಸಲಾಗಿತ್ತು.
ಆದರೆ ಮಾರ್ಚ್-29 ರಂದು ಕರ್ನಾಟಕ ವಿಧಾನ ಸಭೆಗೆ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು, ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ. ಆದ್ದರಿಂದ ಈ ಎರಡೂ ದಿನಾಂಕಗಳಂದು ನಿಗದಿಯಾಗಿದ್ದ ಪ್ರವಾಸಗಳಿಗೆ ಅನುಮತಿ ನೀಡಲು ಚುನಾವಣಾ ಆಯೋಗವನ್ನು ಕೋರಲಾಗಿತ್ತು. ಆದರೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ. ಮಾರ್ಚ್-29 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಕ್ಷಣವೇ ಬುಕ್ಕಿಂಗ್ ವ್ಯವಸ್ಥೆ ತಡೆಹಿಡಿಯಲು ಸೂಚಿಸಿದೆ. ಈ ಪ್ರವಾಸಕ್ಕೆ ಚುನಾವಣಾ ಆಯೋಗದಿಂದ ಅನುಮತಿ ದೊರೆಯದ ಕಾರಣ ಸದರಿ ಪ್ರವಾಸಗಳನ್ನು ರದ್ದುಪಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ.
ನವೆಂಬರ್ನಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದಾಗಿದೆ. 8 ದಿನಗಳ ಕಾಲದ ಈ ಟೂರ್ ಪ್ಯಾಕೇಜ್‌ನಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡಿದೆ. ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್ ಒಳಗೊಂಡಿದೆ.
ಊಟ, ಉಪಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆ ಹೊಂದಿದೆ. ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿಗೆ 5 ಸಾವಿರ ರೂಪಾಯಿಗಳ ಸಹಾಯಧನ ಕೂಡ ನೀಡಲಾಗುತ್ತದೆ. ಭವ್ಯ ಕಾಶಿ – ದಿವ್ಯ ಕಾಶಿಯನ್ನು ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ಕಣ್ತುಂಬಿಕೊಳ್ಳಲಿ ಎನ್ನುವ ಪ್ರಮುಖ ಉದ್ದೇಶದಿಂದ ಈ ರೈಲು ಪ್ರವಾಸವನ್ನು ಆಯೋಜಿಸಲಾಗಿದೆ.
ವಿಶೇಷವಾಗಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್ ಗೌರವ್ ರೈಲನ್ನು ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪ್ರಾರಂಭಿಸಿರುವುದು ಹೆಗ್ಗಳಿಕೆಯೆ ಸರಿ. ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎಸಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಅನ್ನು ಮಾಡಿರುವುದು ಗಮನಾರ್ಹವಾಗಿದೆ.
ಈಗಾಗಲೇ ಈ ಯೋಜನೆಯಡಿ ಮೂರು ಟ್ರಿಪ್ಗಳನ್ನು ಕೈಗೊಳ್ಳಲಾಗಿದೆ. ಇದೀಗ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಎಪ್ರಿಲ್ -14, ಮತ್ತು ಎಪ್ರಿಲ್-28 ರಂದು ಉದ್ದೇಶಿತ ಪ್ರವಾಸವನ್ನು ರದ್ದು ಪಡಿಸಲಾಗಿದೆ. ಈ ಸಂಬಂಧ ಬುಕ್ಕಿಂಗ್ ವ್ಯವಸ್ಥೆಯನ್ನು ತಡೆ ಹಿಡಿಯಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆ.. ಪ್ರತಿ ಚುನಾವಣೆಯಲ್ಲೂ ಹೆಚ್ಚುತ್ತಲೇ ಇದೆ ಕುರುಡು ಕಾಂಚಾಣದ ಕುಣಿತ