ಬೆಂಗಳೂರು: ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇಫ್ ಸಿಟಿ ಯೋಜನೆಯ ಟೆಂಡರ್ ಲೋಪ ಸಂಬಂಧ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾಗೆ ಸ್ಪಷ್ಟೀಕರಣ ಕೋರಿ ಪತ್ರ ಬರೆದಿದ್ದಾರೆ.
ಟೆಂಡರ್ ಪ್ರಕ್ರಿಯೆ ಸಂಬಂಧ ಡಿ.25ರಂದು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದ ಪ್ರತಿಯನ್ನು ನನಗೂ ಕಳುಹಿಸಿದ್ದೀರ. ಈ ಹಿನ್ನೆಲೆಯಲ್ಲಿ ಕೆಲ ವಿಚಾರಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿಟ್ಟಿನಲ್ಲಿ ಆದಷ್ಟು ಬೇಗ ಮಾಹಿತಿ ನೀಡುವಂತೆ ಎಸಿಎಸ್ ರಜನೀಶ್ ಗೋಯೆಲ್ ಕೋರಿದ್ದಾರೆ.
ಇದನ್ನೂ ಓದಿ : ನಿರ್ಭಯಾ ಸೇಫ್ ಸಿಟಿ ಪ್ರಕರಣ: ಸಮಿತಿ ಅಧ್ಯಕ್ಷ ಸ್ಥಾನದಿಂದ ನಿಂಬಾಳ್ಕರ್ ವಜಾಗೆ ಡಿ ರೂಪಾ ಒತ್ತಾಯ
ಪತ್ರದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರು, ಸೇಫ್ ಸಿಟಿ ಯೋಜನೆ ಅನುಷ್ಠಾನ ಸಂಬಂಧ ನಿಮಗೆ ಯಾವುದಾದರು ಜವಾಬ್ದಾರಿಯನ್ನು ನೀಡಲಾಗಿದೆಯಾ? ಹಾಗಿದ್ದರೆ, ಆ ಸಂಬಂಧ ಸರ್ಕಾರಿ ಆದೇಶ ಅಥವಾ ಲಿಖಿತ ನಿರ್ದೇಶನವನ್ನು ನೀಡುವಂತೆ ಕೋರಿದ್ದಾರೆ.
ಯೋಜನೆಗೆ ಸಂಬಂಧಿಸಿದ ಟಿಪ್ಪಣಿಯನ್ನು ನಾನು ಪರಿಶೀಲಿಸಿದ್ದು, ಅದರಲ್ಲಿ ನಿಮಗೆ ಕಡತದ ಪ್ರತಿ ಕಳಿಸಿರುವುದಾಗಲಿ, ನೀವು ಮಾಡಿರುವ ಅಭಿಪ್ರಾಯ ಮತ್ತು ಟಿಪ್ಪಣಿ ಯಾವುದೇ ಉಲ್ಲೇಖ ಅದರಲ್ಲಿ ಇಲ್ಲ. ನೀವು ಯೋಜನೆ ಸಂಬಂಧ ಕಡತದಲ್ಲಿ ಏನಾದರೂ ಟಿಪ್ಪಣಿ ಬರೆದಿದ್ದೀರಾ? ಅಥವಾ ಅದನ್ನು ಮುಖ್ಯ ಕಾರ್ಯದರ್ಶಿ ಅಥವಾ ನನ್ನ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ನೀವು ಯೋಜನೆಗಾಗಿ ಟೆಂಡರ್ ಹಾಕಿದ್ದ ಅರ್ನೆಸ್ಟ್ ಅಂಡ್ ಯಂಗ್ ಸಂಸ್ಥೆಗೆ ನವೆಂಬರ್ 11 ರಂದು ಕರೆ ಮಾಡಿ ಟೆಂಡರ್ ಪ್ರಕ್ರಿಯೆಯ ಮಾಹಿತಿ ನೀಡುವಂತೆ ಕೇಳಲು ಕಾರಣ ಏನು ಎಂದು ಡಿ.ರೂಪಾಗೆ ಪ್ರಶ್ನಿಸಿದ್ದಾರೆ. ಆ ಸಂಸ್ಥೆಗೆ ಕರೆ ಮಾಡುವ ಮುನ್ನ ಯಾವುದಾದರು ವರದಿಯನ್ನು ಮುಖ್ಯ ಕಾರ್ಯದರ್ಶಿಗೆ ಅಥವಾ ನನಗೆ ಸಲ್ಲಿಸಿದ್ದೀರಾ? ಹಾಗಿದ್ದರೆ ಅದರ ಪ್ರತಿಯನ್ನು ನನಗೆ ಕೊಡುವಂತೆ ಕೋರಿದ್ದಾರೆ.
ಇದನ್ನೂ ಓದಿ : ನಿರ್ಭಯಾ ಯೋಜನೆಯ ಟೆಂಡರ್ ಲೋಪ: ತನಿಖಾಧಿಕಾರಿಯಾಗಿ ಕಮಲ್ ಪಂತ್ ನೇಮಕ
ನೀವು ಬರೆದ ಪತ್ರದಲ್ಲಿ ಟೆಂಡರ್‌ನಲ್ಲಿ ಲೋಪ ಇದ್ದು, ಪಾರದರ್ಶಕವಾಗಿಲ್ಲ ಮತ್ತು ನಿರ್ದಿಷ್ಟ ಸಂಸ್ಥೆಗೆ ಅನುಕೂಲಕರವಾಗಿ ಕರಡು ರಚಿಸಲಾಗಿದೆ ಎಂದು ತಿಳಿಸಿದ್ದೀರಾ? ಹಾಗಿದ್ದರೆ ಟೆಂಡರ್ನ ಯಾವ ಕಲಂ ನಿರ್ದಿಷ್ಟ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಜೊತೆಗೆ ಇದನ್ನು ಮುಖ್ಯ ಕಾರ್ಯದರ್ಶಿ ಅಥವಾ ನನ್ನ ಗಮನಕ್ಕೆ ಲಿಖಿತ ರೂಪದಲ್ಲಿ ತಂದಿದ್ದೀರಾ ಎಂದು ಕೇಳಿದ್ದಾರೆ.
ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸೇಫ್ ಸಿಟಿ ಯೋಜನೆಯ ಜಾರಿ ಬಗ್ಗೆ ಪ್ರಗತಿ ಪರಿಶೀಲಿಸಲು ನ.5ರಂದು ನಡೆಸಿದ ಎರಡನೇ ಅಪೆಕ್ಸ್ ಸಮಿತಿ ಸಭೆಯ ವೇಳೆ ನೀವು ಈ ಸಂಬಂಧ ಲಿಖಿತ ಅಥವಾ ಮೌಖಿಕವಾಗಿ ಯಾವುದಾದರು ಉಲ್ಲೇಖ ಮಾಡಿದ್ದೀರಾ ಎಂಬುದನ್ನು ತಿಳಿಸುವಂತೆ ಕೋರಿದ್ದಾರೆ.