ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪ್ರಕರಣ ಸಂಬಂಧಿಸಿದಂತೆ ಒಂದೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ. ಆದರೆ, ಇತ್ತ ಬಂಧನಕ್ಕೊಳಗಾಗಿರುವ ಆರೋಪಿಗಳ ಪರವಾಗಿ ಜಾಮೀನು ಅರ್ಜಿಗೆ ಪೋಷಕರು ರೆಡಿಯಾಗ್ತಿದ್ದಾರೆ.
ಈಗಾಗಲೇ ಬಂಧಿಸಿರುವ ಆರೋಪಿಗಳ ಮೇಲೆ ಗೂಂಡಾ ಕಾಯಿದೆ, ರೌಡಿಶೀಟ್ ತೆರೆಯಲು ಸಿದ್ಧತೆ ನಡೆದಿದ್ದು, ಜಾಮೀನು ನಿರೀಕ್ಷೆಯಲ್ಲಿರುವ ಆರೋಪಿಗಳಿಗೆ ಶಾಕ್ ನೀಡಲಾಗಿದೆ.
ಈಗಾಗಲೇ UAPA (ಕಾನೂನು ಬಾಹಿರ ಚಟುವಟಿಕೆ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಬಳಿ ಎನ್ಐಎ ತಂಡ ವರದಿ ಪಡೆದಿದ್ದು, ಇನ್ನಷ್ಟು ಆರೋಪಿಗಳನ್ನು ಎನ್ಐಎ ತನಿಖೆಗೊಳಪಡಿಸುವ ಸಾಧ್ಯತೆ ಇದೆ. ಈಗಾಗಲೇ ಎನ್ಐಎ ತಂಡ ಬಂಧಿತ ಸಮೀಯುದ್ದೀನ್ ವಿರುದ್ಧದ ತನಿಖೆ ಚುರುಕುಗೊಳಿಸಿದ್ದು, ಉಗ್ರರ ಜೊತೆಗಿನ ನಂಟು ಬಯಲಾಗಿದೆ.