ಬೆಂಗಳೂರು: ಕುಖ್ಯಾತ ಅಂತಾರಾಜ್ಯ ಕಳ್ಳನ ಬಂಧನ ಮಾಡಿ ಸಿಲಿಕಾನ್ ಸಿಟಿಯಲ್ಲೇ ಮೊದಲ ಬಾರಿಗೆ ಸುಮಾರು 12 ಕೆಜಿ ತೂಕದ ಚಿನ್ನ ವಜ್ರ ಫ್ಲಾಟಿನಂ ಆಭರಣ ವಶಪಡಿಸಿಕೊಳ್ಳುವಲ್ಲಿ ಆಗ್ನೇಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಮುರುಗನ್ ಅಲಿಯಾಸ್ ಬಾಲ ಮುರುಗನ್ ಉರುಫ್ ಶಿವಕುಮಾರ್ ಬಂಧಿತ ಆರೋಪಿ.
ಅಕ್ಟೋಬರ್ 2ನೇ ತಾರೀಖು ತಮಿಳುನಾಡು ತಿರುಚಿಯ ಪ್ರತಿಷ್ಠಿತ ಲಲಿತ ಜ್ಯುವೆಲ್ಲರಿಯಲ್ಲಿ ಕಳ್ಳತನ ನಡೆದಿದ್ದು, ಈ ಪ್ರಕರಣದಲ್ಲಿ ಆರೋಪಿಗಳಾದ ಗಣೇಶ್ ಮತ್ತು ಸತೀಶ್ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಆದರೆ, ಮುರುಗನ್ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದು ಅಕ್ಟೋಬರ್ 11ರಂದು ಮೇಯೋ ಹಾಲ್‌ನ 11ನೇ ಎಸಿಎಂಎಂ ಕೋರ್ಟ್ಗೆ ಶರಣಾಗಿದ್ದ. ನಂತರ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿ ಮುರುಗನ್ನ ವಶಕ್ಕೆ ಪಡೆದಿದ್ದರು.
ಪೊಲೀಸರು ಆರೋಪಿಯ ವಿಚಾರಣೆ ನಡೆಸಿದಾಗ ಲಲಿತಾ ಜ್ಯವೆಲ್ಲರಿ ಕಳ್ಳತನ, ನಗರದ ಅಮೃತಹಳ್ಳಿ, ಮಡಿವಾಳ ಹಾಗೂ ಬಾಣಸವಾಡಿಯಲ್ಲಿ ಕಳ್ಳತನ ಮಾಡಿದ ವಿಚಾರ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ತಮಿಳುನಾಡಿನ ತಿರುಚಿಯ ನದಿದಂಡೆಗೆ ತೆರಳಿದ ಪೊಲೀಸರಿಗೆ ಪೊದೆಯ ಒಳಗೆ ಹಳ್ಳದಲ್ಲಿ ಹೂತಿಟ್ಟಿದ್ದ ಕೆಜಿಗಟ್ಟಲೆ ಚಿನ್ನವನ್ನು ಪೊಲೀಸರಿಗೆ ತೋರಿಸಿದ್ದಾನೆ. ಆರೋಪಿ ಮುರುಗನ್ ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದ. ಆದರೆ, ತನ್ನ ಹಳೆ ಚಾಳಿಯನ್ನು ಬಿಡದೆ ಮತ್ತದೇ ಕೆಲಸ ಮುಂದುವರೆಸಿ ನಗರದ ಹೊರವಲಯ ನೆಲಮಂಗಲ ಹಾಗೂ ಅನೇಕಲ್‌ನಲ್ಲಿ ಕಳ್ಳತನ ಮಾಡಿದ್ದ. ಬಳಿಕ ತಮಿಳುನಾಡಿಗೆ ತೆರಳಿ ದೊಡ್ಡ ದೊಡ್ಡ ಬ್ಯಾಂಕ್ ಹಾಗೂ ಚಿನ್ನಾಭರಣ ಮಳಿಗೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಈ ಬಗ್ಗೆ ಎಳೆ ಎಳೆಯಾಗಿ ಮುರುಗನ್ ಆಗ್ನೇಯ ಪೊಲೀಸರ ಎದುರು ಸತ್ಯ ಬಿಚ್ಚಿಟ್ಟಿದ್ದಾನೆ.