ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿ ಮತ್ತಷ್ಟು ಚುರುಕುಗೊಂಡಿದೆ. ಮೆಟ್ರೋ ಎರಡನೇ ಹಂತದಲ್ಲಿ ಸುರಂಗ ಪ್ರವೇಶಿಸಿದ್ದ ಟಿಬಿಎಂ ಬ್ರೇಕ್ ಥ್ರೂಗೆ ಕ್ಷಣಗಣನೆ ಶುರುವಾಗಿದೆ.
ಊರ್ಜಾ ಎಂಬ ಹೆಸರಿನ ಟನಲ್ ಬೋರಿಂಗ್ ಮಿಷನ್ 2020ರ ಆಗಸ್ಟ್ನಲ್ಲಿ ಸುರಂಗ ಪ್ರವೇಶಿಸಿತ್ತು. ಇದು ಸುಮಾರು 855 ಮೀಟರ್ ಸುರಂಗ ಕೊರೆದಿದೆ. ಸದ್ಯ 13 ತಿಂಗಳ ಬಳಿಕ ಟನಲ್ನಿಂದ ಹೊರ ಬರುತ್ತಿದೆ.
ಸಿಎಂ ಕಾಮಗಾರಿ ವೀಕ್ಷಣೆ: ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಸುರಂಗ ಮಾರ್ಗ ಕೆಲಸ ಪೂರ್ಣಗೊಳಿಸಿ ಮೊದಲಿಗೆ ಊರ್ಜಾ ಟಿಬಿಎಂ ಹೊರಬರುತ್ತಿದೆ. ಊರ್ಜಾ ಬ್ರೇಕ್ ಥ್ರೂ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಊರ್ಜಾ ಹೊರಬರಲಿದ್ದು, ಅದನ್ನ ವೀಕ್ಷಣೆ ಮಾಡಿ ಸಿಎಂ ಪರಿಶೀಲಿಸಲಿದ್ದಾರೆ.
ಇನ್ನು ಗೊಟ್ಟಿಗೆರೆಯಿಂದ ನಾಗವಾರದವರೆಗೆ ಒಟ್ಟು 21 ಕಿ.ಮೀ ಇದ್ದು ಈ ಪೈಕಿ 13 ಕಿ.ಮೀ ಸುರಂಗ ಮಾರ್ಗ ಇರುವುದಾಗಿ ನಮ್ಮ ಮೆಟ್ರೋ ನಿಗಮದ ಎಂ.ಡಿ ಅಂಜುಂ ಫರ್ವೇಜ್ ಮಾಹಿತಿ ನೀಡಿದ್ದಾರೆ.