ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಪಾಳ್ಯದಲ್ಲಿ ಕಂಡು ಬಂದಿದೆ. ನೈಸ್ ರಸ್ತೆಯ ಫ್ಲೈಓರ್ ಕೆಳಭಾಗದಲ್ಲಿ ಸರಿಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ತಡರಾತ್ರಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರಿನಲ್ಲಿ ಬರ್ಬರ ಕೊಲೆ: ಮಾರಕಾಸ್ತ್ರಗಳಿಂದ ತಲೆ ಮತ್ತು ಮುಖಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತನ ಕುರಿತು ಯಾವುದೇ ವಿವರ ಲಭ್ಯವಾಗಿಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೊಲೀಸ್ ಸಹಾಯವಾಣಿಗೆ ಬಂದ ಕರೆಯ ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.
ತಡರಾತ್ರಿ ಹತ್ಯೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಹತ್ಯೆಯ ಸಮಯ ತಿಳಿಯಲಿದೆ. ಮೃತನ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಕೊಲೆಯ ಬಗ್ಗೆ ಡಿಸಿಪಿ ಹೇಳಿದ್ದು ಹೀಗೆ: ಕೊಲೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ ಕೃಷ್ಣಕಾಂತ್, ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಬಂದಿತ್ತು. 112 ಕರೆಯ ಮೂಲಕ ಈ ಕೊಲೆ ಸುದ್ದಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ತಿಳಿದಿತ್ತು. ಗೊಟ್ಟಿಗೆರೆ ಪಾಳ್ಯದ ನೈಸ್ ರಸ್ತೆಯ ಫ್ಲೈಓವರ್ ಕೆಳಭಾಗದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕ ಮೃತದೇಹ ಕಂಡು ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು ಎಂದು ಡಿಸಿಪಿ ಕೃಷ್ಣಕಾಂತ್ ಹೇಳಿದ್ದರು.
ಸುದ್ದಿ ತಿಳಿದ ಸುಮಾರು 15 ರಿಂದ 20 ನಿಮಿಷದೊಳಗೆ ನಮ್ಮ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಮೃತ ದೇಹದ ಮೇಲೆ ಗಾಯಗಳ ಗುರುತುಗಳಿವೆ. ತಲೆ, ಮುಖಕ್ಕೆ ಸೇರಿದಂತೆ ಇನ್ನಿತರ ಭಾಗಗಳಿಗೆ ಯಾರೋ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆ ಮೂಲಕ ಕಂಡು ಬಂದಿದೆ. ಈ ಕೊಲೆ ಬಗ್ಗೆ ತನಿಖೆ ಕೈಗೊಳ್ಳಲಾಗುವುದು. ಸದ್ಯ ಕೊಲೆಯಾದ ವ್ಯಕ್ತಿಯ ಪತ್ತೆ ಕಾರ್ಯಾ ನಡೆಯಲಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗುವುದು. ಆರೋಪಿಯ ಗುರುತು ಪತ್ತೆ ಹಚ್ಚಲು ಕಾರ್ಯ ಕೈಗೊಳ್ಳಲಾಗುವುದು. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಡಿಸಿಪಿ ಕೃಷ್ಣಕಾಂತ್ ಹೇಳಿದರು.
ವ್ಯಕ್ತಿಯ ಬಳಿ ಯಾವುದೇ ಗುರುತಿನ ಚೀಟಿಗಳು ಇಲ್ಲ. ರಾಮನಗರ ಮತ್ತು ಬೆಂಗಳೂರು ಗಡಿ ಭಾಗದಲ್ಲಿ ಈ ಕೊಲೆ ಆಗಿದೆ. ಕೊಲೆ ಬೇರೆಡೆ ಮಾಡಿ ಇಲ್ಲಿ ತಂದು ಹಾಕಿಲ್ಲ. ಕೊಲೆ ಆಗಿರುವುದು ಇಲ್ಲೇ. ಆದರೆ ಆ ವ್ಯಕ್ತಿ ರಾಮನಗರದವರೋ ಅಥವಾ ಬೆಂಗಳೂರಿನವರೋ ಎಂಬುದು ತಿಳಿದು ಬರಬೇಕಾಗಿದೆ. ವ್ಯಕ್ತಿಯನ್ನು ಮಚ್ಚಿನಿಂದ ಹಲ್ಲೆ ಮಾಡಿರಬಹುದೆಂಬುದು ನಮ್ಮ ಅನುಮಾನವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕೆಲವೊಂದು ಮಾಹಿತಿ ತಿಳಿದು ಬರಲಿದೆ ಎಂದು ಡಿಸಿಪಿ ಕೃಷ್ಣಕಾಂತ್ ಹೇಳಿದರು.
ಓದಿ: ಕನ್ಯೆ ಸಿಗದೆ ಮದುವೆ ಆಗಲಿಲ್ಲ.. ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ