ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್ ರಾಜ್ ಅವರ ಸಂಬಂಧಿ ಅರುಣ್ ಮನೋರಾಜ್, ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಗಲಭೆ ಪ್ರಕರಣದಲ್ಲಿ ಅರುಣ್ ಮನೋರಾಜ್ ಈಗಾಗಲೇ ಬಂಧಿಸಲ್ಪಟ್ಟಿದ್ದಾರೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಅರುಣ್ ಮನೋರಾಜ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ದೇವರಜೀವನಹಳ್ಳಿ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಓದಿ:ಅತ್ಯಾಚಾರ ಆರೋಪ: ಸ್ವಾಮೀಜಿ ಪೂರ್ವಾಶ್ರಮ ಸೋದರ ದೊರೆಸ್ವಾಮಿ ಜಾಮೀನು ಅರ್ಜಿ ವಜಾ
ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ನಡೆಸಲು ಒಳಸಂಚು ರೂಪಿಸಿದ ಆರೋಪದ ಮೇಲೆ ಅರುಣ್ ಮನೋರಾಜ್ ಅವರನ್ನು ಬಂಧಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸ 2020ರ ಆ.13ರಂದು ನೀಡಿರುವ ದೂರು ಆಧರಿಸಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇವರ ಜಾಮೀನು ಅರ್ಜಿಯನ್ನು 67ನೇ ಸಿಟಿ ಸಿವಿಲ್ ಕೋರ್ಟ್ 2021ರ ಫೆ.5ರಂದು ತಿರಸ್ಕರಿಸಿದೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿರುವ ಆರೋಪಿ ಅರುಣ್, ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರ ಇಲ್ಲದಿದ್ದರೂ ಪೊಲೀಸರು ಸುಳ್ಳು ಆರೋಪದ ಮೇಲೆ ಬಂಧಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ. ಆದ್ದರಿಂದ ತನಗೂ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.