ಬೆಂಗಳೂರು : ಕ್ಯಾಷ್ ಡೆಪಾಸಿಟ್ ಮೆಷಿನ್ಗೆ (ಸಿಡಿಎಂ) ಹಣ ಜಮಾ ಮಾಡಲು ಬರುವ ಗ್ರಾಹಕರಿಗೆ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ನಾಗಮಂಗಲ ಮೂಲದ ನವೀನ್‌ಕುಮಾರ್ ಎಂಬಾತನನ್ನು ಬಂಧಿಸಿ 55 ಸಾವಿರ ರೂಪಾಯಿ ಜಪ್ತಿ ಮಾಡಿದ್ದಾರೆ. ಬಿಇ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿರುವ ನವೀನ್ ಸಾಲ ಮಾಡಿಕೊಂಡಿದ್ದ. ಹೀಗಾಗಿ, ಹಣ ಸಂಪಾದನೆಗೆಂದು ಈ ಅಡ್ಡದಾರಿ ಹಿಡಿದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈತ 'ವ್ಯಾಪಾರ್' ಎಂಬ ಹೆಸರಿನಲ್ಲಿ ನಕಲಿ ಆ್ಯಪ್ ತೆರೆದಿದ್ದ. ಬ್ಯಾಂಕ್ನ ಸಿಡಿಎಂ ಕಾರ್ಯನಿರ್ವಹಿಸುವ ಹಾಗೆಯೇ ಆ್ಯಪ್ ರಚಿಸಿಕೊಂಡಿದ್ದ. ಇತ್ತೀಚೆಗೆ ಆರ್ಆರ್ನಗರ ನಿಮಿಷಾಂಬ ಸರ್ಕಲ್ ಬಳಿಯ ಎಸ್ಬಿಐ ಬ್ಯಾಂಕ್ ಬಳಿ ಹಣ ಡೆಪಾಸಿಟ್ ಮಾಡಲು ಬಂದವರಿಗೆ ವಂಚಿಸಿದ್ದಾನೆ.
ಆನ್ಲೈನ್ ಪೇಮೆಂಟ್ ಹೆಸರಲ್ಲಿ ವಂಚನೆ
ನನಗೆ ತುರ್ತು ಹಣದ ಅವಶ್ಯಕತೆಯಿದೆ. ವಿಥ್ಡ್ರಾ ಮಿತಿ ಮುಗಿದಿದೆ. ನೀವು ಠೇವಣಿ ಇರಿಸುವ ಹಣ ನನಗೆ ಕೊಡಿ. ಆನ್ಲೈನ್ ಮುಖಾಂತರ ಹಣ ವರ್ಗಾಯಿಸುವುದಾಗಿ ಗ್ರಾಹಕರನ್ನ ನಂಬಿಸಿ ಹಣ ಪಡೆಯುತ್ತಿದ್ದ. ಇದಕ್ಕೆ ಪ್ರತಿಯಾಗಿ ವ್ಯಾಪಾರ್ ಆ್ಯಪ್ನ ಪೇಮೆಂಟ್ ಔಟ್ ಸಂದೇಶ ಕಳುಹಿಸಿ ಹಣ ವರ್ಗಾಯಿಸಿರುವುದಾಗಿ ನಂಬಿಸುತ್ತಿದ್ದ.
ತಮ್ಮ ಮೊಬೈಲ್ಗೆ ಮೆಸೇಜ್ ಬರುತ್ತಿದ್ದಂತೆ ನಿಜವಾಗಿಯೂ ಹಣ ವರ್ಗಾವಣೆಯಾಗಿದೆ ಎಂದು ಭಾವಿಸಿ ಗ್ರಾಹಕರು ಹಣ ನೀಡುತ್ತಿದ್ದರು. ಹಣ ಪಡೆದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗುತ್ತಿದ್ದ. ಆದರೆ, ಗ್ರಾಹಕರ ಮೊಬೈಲ್ಗೆ ನಕಲು ಸಂದೇಶ ಮಾತ್ರ ಬರುತ್ತಿತ್ತು. ಆದರೆ, ಯಾವುದೇ ಹಣ ಸಂದಾಯವಾಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರೊಂದಿಗೂ ಸ್ನೇಹ ಬೆಳೆಸಿಕೊಂಡಿದ್ದ
ಅಪರಾಧ ಕೃತ್ಯ ಎಸಗುವ ಮುನ್ನ ಆರೋಪಿ ಪೊಲೀಸರನ್ನು ಪರಿಚಯಿಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ. ಬಳಿಕ ಮಳೆ-ಬಿಸಿಲಿನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಜರ್ಕಿನ್ ಕೊಡಿಸುವುದಾಗಿ ಅವರೊಂದಿಗೆ ಸ್ನೇಹಿತನಂತೆ ಮಾತನಾಡುತ್ತಿದ್ದ. ಜೊತೆಗೆ ಠಾಣೆಯ ಹತ್ತಿರ ಬಂದು ಪೊಲೀಸರೊಂದಿಗೂ ಮಾತನಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿಯನ್ನ ಬಂಧಿಸಿದ್ದು ಹೇಗೆ?
ಸಿಡಿಎಂ ಕೇಂದ್ರದಲ್ಲಿ ಹಣ ವರ್ಗಾಯಿಸಲು ಬರುವ ಗ್ರಾಹಕರಿಗಾಗಿ ಕಾದು ಇಲ್ಲಸಲ್ಲದ ಸುಳ್ಳು ಹೇಳಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಚಹರೆ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯದ ಆಧಾರದ ಮೇಲೆ ತನಿಖೆ ಕೈಗೊಂಡಿದ್ದ ಪೊಲೀಸರು, ಠಾಣೆಗೆ ಬಂದು ಪೊಲೀಸರೊಂದಿಗೆ ವ್ಯವಹರಿಸುತ್ತಿದ್ದ ಈತನ ಚಲನವಲನದಲ್ಲಿ ಅನುಮಾನ ವ್ಯಕ್ತವಾಗಿತ್ತು. ಬಳಿಕ ಆತನ ವಿಚಾರಣೆ ನಡೆಸಿದಾಗ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ತಿಳಿದು ಬಂದಿದೆ.