ಬೆಂಗಳೂರು: ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ವಿಧಾನಸೌಧದಲ್ಲಿ ಮೊದಲ ಬಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಇಲಾಖೆಯ ಯೋಜನೆಗಳು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಪೂರ್ವ ಮುಂಗಾರಿನಲ್ಲಿ ವಾಡಿಕೆಯಾಗಿ 108 ಮಿಲಿ ಮೀಟರ್ ಮಳೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 108 ಮಿಮೀ ಮಳೆಯಾಗಿದ್ದು, ಯಾವುದೇ ಕೊರತೆ ಆಗಿರುವುದಿಲ್ಲ. 2022-23ನೇ ಸಾಲಿನ ಮೂರನೇ ಮುಂಗಡ ಅಂದಾಜಿನಂತೆ 139.28 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ಅಂದಾಜಿಸಲಾಗಿದೆ. 2023ರ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ.
ಬಿತ್ತನೆ ಬೀಜದ ಕೊರತೆ ಇಲ್ಲ-ಕೃಷಿ ಸಚಿವ: ರೈತರ ಸಮಸ್ಯೆ ನಮ್ಮ ಮೊದಲ ಆದ್ಯತೆಯಾಗಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇವೆ. ಪೂರ್ವ ಮುಂಗಾರು ಬೆಳೆಗಳ 2.95 ಲಕ್ಷ ಹೆಕ್ಟೇರ್ ಗುರಿಯಿದ್ದು, ಇದುವರೆಗೆ 2.48 ಲಕ್ಷ ಹೆಕ್ಟೇರ್ (84%)ಪ್ರದೇಶದಲ್ಲಿ ಕೈಗೊಳ್ಳಲಾಗಿರುತ್ತದೆ. 5.54 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆಯಿದ್ದು, 7.85 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳು ಲಭ್ಯವಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
25.47 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ: 2023-24 ಸಾಲಿನ ಮುಂಗಾರು ಹಂಗಾಮಿಗೆ 25.47 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. 7.30 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. ಪ್ರಸ್ತುತ ಖಾಸಗಿ ಹಾಗೂ ಸಹಕಾರ ಸಂಘಗಳಲ್ಲಿ 13.90 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. 1.68 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕಾಪು ದಾಸ್ತಾನು(Buffer Stock)ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಲಭ್ಯವಿದ್ದು, ಪ್ರಸ್ತುತ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.
ಮಣ್ಣಿನ ಪರೀಕ್ಷೆಯ ರಿಪೋರ್ಟ್: ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ರೈತರಿಗೆ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಬಾರದು. ಪರೀಕ್ಷೆ ಮಾಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ರೈತರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಬೇಕು.
ಮುಂಗಾರಿನಲ್ಲಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ಸಚಿವ ಚಲುವರಾಯಸ್ವಾಮಿ ಅವರು ಸೂಚನೆ ನೀಡಿದರು. ಇದರ ಜೊತೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಒಗಳು ಹಾಜರಿರಬೇಕು. ಮಣ್ಣಿನ ಪರೀಕ್ಷೆ ರಿಪೋರ್ಟ್ ಗಳನ್ನು ಸೂಕ್ತ ಸಮಯದಲ್ಲಿ ನೀಡಬೇಕು. ಬೆಳೆ ವಿಮೆ ನೀಡುವಲ್ಲಿ ರೈತರಿಗೆ ಸಮಸ್ಯೆ ಆಗಬಾರದು. ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಸ್ಯೆಯಾದರೂ ಜಂಟಿ ನಿರ್ದೇಶಕರೇ ನೇರ ಹೊಣೆ ಆಗ್ತೀರಾ ಎಂದು ಸಚಿವರು ಎಚ್ಚರಿಕೆ ನೀಡಿದರು.
ನೆಟೆರೋಗಕ್ಕೆ ಶೀಘ್ರದಲ್ಲೇ ಪರಿಹಾರ ಬಿಡುಗಡೆ: 2022-23ನೇ ಸಾಲಿನಲ್ಲಿ ನೆಟೆ ರೋಗದಿಂದ ಕಲಬುರಗಿ ಜಿಲ್ಲೆಯಲ್ಲಿ 1,98,488 ಹೆಕ್ಟೇರ್, ಬೀದರ್ ಜಿಲ್ಲೆಯಲ್ಲಿ 14,495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20,401 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 10,259 ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿರುತ್ತದೆ. ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್ 10 ಸಾವಿರ ಪರಿಹಾರದಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿಗಳ ಅನುದಾನ ಘೋಷಿಸಲಾಗಿದ್ದು, ಶೀಘ್ರದಲ್ಲೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದರು.
ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ: ಕೃಷಿ ಇಲಾಖೆಯಲ್ಲಿ ಶೇ.58 ನಷ್ಟು ಹುದ್ದೆಗಳು ಖಾಲಿಯಿದ್ದು, ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸಲು ವಿಳಂಬ ಆಗಲಿದೆ. ಆ ನಿಟ್ಟಿನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಅವಶ್ಯವಿದೆ. ಹಾಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಕೃಷಿ ಇಲಾಖೆಗೆ ಒಟ್ಟು 8982 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 3 ,787 ಹುದ್ದೆಗಳು ಭರ್ತಿಯಾಗಿವೆ. 5,195 ಹುದ್ದೆಗಳು ಖಾಲಿ ಇರುತ್ತವೆ.
ಅಮೃತ ಮಳಿಗೆ ಆರಂಭ: ನಂದಿನಿ ಸ್ಟಾಲ್ ತರ ರೈತರ ಉತ್ಪನ್ನಗಳನ್ನು ಎಲ್ಲಾ ಜಿಲ್ಲೆಯಲ್ಲಿ ಮಳಿಗೆ ಮೂಲಕ ಮಾರಾಟ ಮಾಡಲು ಚಿಂತನೆ. ಅಮೃತ ಮಳಿಗೆ ಎಂಬ ಹೆಸರಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಈಗಾಗಲೇ ಪ್ರಾಯೋಗಿಕವಾಗಿ ಎರಡು ಕಡೆ ಮಳಿಗೆ ಕಾರ್ಯಾಚರಿಸುತ್ತಿದೆ. ಅಲ್ಲಿ ಈ ಮಳಿಗೆಗಳು ಯಶ ಕಂಡಿದೆ. ಮುಂದೆ ಎಲ್ಲಾ ಜಿಲ್ಲೆಗಳಲ್ಲಿ ನಂದಿನಿ ಸ್ಟಾಲ್ ತರದ ಮಳಿಗೆ ಆರಂಭಿಸಲು ನಿರ್ಧರಿಸಲಾಗಿದೆ. ನಂದಿನಿ ಸ್ಟಾಲ್ ಪಕ್ಕ ಇಲ್ಲವಾದರೆ ಸೂಕ್ತ ಸ್ಥಳದಲ್ಲಿ ಮಳಿಗೆ ಆರಂಭಿಸಲಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆ ನೋಡಿ ಕಾರ್ಯಕ್ರಮ ಜಾರಿ: ಐದು ಗ್ಯಾರಂಟಿ ಯೋಜನೆಗಳನ್ನು ನೋಡಿ ಇಲಾಖೆಯಲ್ಲಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಇದೇ ವೇಳೆ ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಗ್ಯಾರಂಟಿಗಳಿಗೆ ತಗುಲುವ ವೆಚ್ಚವನ್ನು ನೋಡಿ ಕೃಷಿ ಇಲಾಖೆಗಳಲ್ಲಿನ ಕಾರ್ಯಕ್ರಮವನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಸೂಕ್ತ ಆಡಳಿತ ನೀಡುವಲ್ಲಿ ಎನ್‌ಡಿಎ ಸರ್ಕಾರ ಸಂಪೂರ್ಣ ಎಡವಿದೆ: ಮನೀಶ್ ತಿವಾರಿ