ಬೆಂಗಳೂರು: ಪೌರಕಾರ್ಮಿಕರಿಗೆ ಕೊರೊನಾ ವಾರಿಯರ್ಸ್ ಎಂದು ಕರೆದಿದ್ದ ಬಿಬಿಎಂಪಿ ಕೊರೊನಾ ಬಂದು ನರಳುತ್ತಿದ್ರೂ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡದೆ ಅಮಾಯಕಿಯ ಸಾವಿಗೆ ಕಾರಣವಾಗಿದೆ.
ಹೌದು 28 ವರ್ಷದ ಮಹಿಳೆ ಪೌರಕಾರ್ಮಿಕರಾಗಿ ಹೆಬ್ಬಾಳ ಕ್ಷೇತ್ರದ ವಾರ್ಡ್ ನಂಬರ್ 22, ವಿಶ್ವನಾಥ ನಾಗೇನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ರೂ ಸಹ ಕೆಲಸ ಮಾಡಿದ್ದಾರೆ.
ನಿನ್ನೆ ಸಂಜೆ ನಾಲ್ಕು ಗಂಟೆ ವೇಳೆಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಬಳಿಕ ವಿಕ್ಟೋರಿಯಾ, ರಾಮಯ್ಯ, ಮಣಿಪಾಲ್, ವಿಕ್ರಮ್ ಆಸ್ಪತ್ರೆ, ಹೀಗೆ ಎಲ್ಲಾ ಕಡೆ ವಿಚಾರಿಸಿದ್ರೂ ಬೆಡ್ ಇಲ್ಲ ಎಂದಿದ್ದಾರೆ. ಆರೋಗ್ಯಾಧಿಕಾರಿ ಸಿದ್ಧಪಾಜಿ ಫೋನ್ ಕರೆಗೆ ಸಿಕ್ಕಿಲ್ಲ. ಎಷ್ಟೇ ಕಾಲ್ ಮಾಡಿದ್ರೂ ಸ್ಪಂದಿಸಿಲ್ಲ.
ಎಂಒಹೆಚ್ ಸತ್ಯವತಿ ಕೂಡಾ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ. ಕಡೆಗೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಸೇರಿಸಲಾಯಿತು. ಆದ್ರೆ ವೆಂಟಿಲೇಟರ್ ಇಲ್ಲದೆ ಬೆಳಗ್ಗೆ ಐದು ಗಂಟೆಗೆ ಮೃತಪಟ್ಟಿದ್ದಾರೆ.
ಪಾಲಿಕೆಯ ನಿರ್ಲಕ್ಷ್ಯದಿಂದಲೇ ಈ ಸಾವಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಸಂಘದ ಮುಖಂಡ ದಾಸ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಬೆಡ್ ಸಿಗದೆ, ಆಸ್ಪತ್ರೆ ಅಲೆದಾಡುವ ಪರಿಸ್ಥಿತಿ ಬಂದು, ಜ್ವರ ಹೆಚ್ಚಾಗಿ ಕೊರೊನಾಕ್ಕೆ ಪೌರಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ಈವರೆಗೆ ಸಾಕಷ್ಟು ಪೌರಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿದ್ರೂ, ಇವರ ಆರೋಗ್ಯ ಕಾಳಜಿ ಮಾಡುವಲ್ಲಿ ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿ ಬರುತ್ತಿದೆ.