ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ಭೀತಿ ಪರಿಣಾಮ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದೆ. ಈ ಸಂಬಂಧ ದಂಡ ವಿಧಿಸದೆ, ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಕೊರೊನಾ ನಿಯಮಗಳ ಪಾಲನೆಯಲ್ಲಿ ಬಹಳ ಕೊರತೆ ಇದೆ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಮಾಡದಿರುವುದು ಗೊತ್ತಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಹರಿಯಾಣ, ದೆಹಲಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ, ಕೊರೊನಾ ನಿಯಮಗಳನ್ನು ಪಾಲನೆ ಮಾಡುವಂತಾಗಬೇಕು ಎಂದರು. ಪ್ರತಿಯೊಬ್ಬರೂ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಬೇಕು. ಬೂಸ್ಟರ್ ಡೋಸ್ ಸಹ ಪಡೆಯಬೇಕು. ಕೋವಿಡ್ ಪರೀಕ್ಷೆ ಹೆಚ್ಚಳ ಮಾಡುವ ಅಗತ್ಯವಿದೆ. ನಗರದಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಸಾವಿರ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.
10 ಸಾವಿರ ಪರೀಕ್ಷೆ: ಶೀಘ್ರದಲ್ಲೇ 10 ಸಾವಿರ ಜನರ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಶೇ 50ರಷ್ಟು ಲಸಿಕೆ ಅಭಿಯಾನ ನಡೆಯುತ್ತಿದೆ. ಮಾರ್ಚ್ ಅಂತ್ಯದಲ್ಲಿ ಕೋವಿಡ್ ಸಿಬ್ಬಂದಿಯನ್ನು ವಾಪಸ್ ಮಾಡಲಾಗಿತ್ತು. ಆದರೂ ಈಗ ಸಿಬ್ಬಂದಿ, ಡಾಕ್ಟರ್ ಹಾಗೂ ವಾಹನಗಳ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ: ಮತ್ತೋರ್ವ ಅಭ್ಯರ್ಥಿ ಬಂಧಿಸಿದ ಸಿಐಡಿ