ಬೆಂಗಳೂರು: ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ವಿವಿಧ ಸಂಘಟನೆಗಳು ಬಿಬಿಎಂಪಿಗೆ ಅರ್ಜಿ ಸಲ್ಲಿಸಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ರಂಗಪ್ಪ ತಿಳಿಸಿದರು.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಸೇನೆ ಸಂಘಟನೆ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಅನುಮತಿ ಕೋರಿದೆ. ವಿಶ್ವ ಸನಾತನ ಪರಿಷತ್ ಆಗಸ್ಟ್ 14 ಹಾಗೂ 15 ರಂದು ಭಾರತ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆಗೆ ಅನುಮತಿ ಕೋರಿ ಮತ್ತು ವಂದೇ ಮಾತರಂ ಸಮಾಜ ಸೇವೆ ಸಂಸ್ಥೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಅವಕಾಶ ಕೋರಿ ಅರ್ಜಿಗಳನ್ನು ಬಿಬಿಎಂಪಿ ಪಶ್ಚಿಮ ಆಯುಕ್ತರ ಕಚೇರಿಗೆ ಸಲ್ಲಿಸಿದ್ದಾರೆ. ಈ ಕುರಿತು ಪೊಲೀಸರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಡಿ ಲಿಮಿಟೇಷನ್ ವರದಿ ಸರ್ಕಾರಕ್ಕೆ ಸಲ್ಲಿಕೆ: ಡಿ ಲಿಮಿಟೇಷನ್ ಪಟ್ಟಿ ಸಿದ್ಧಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. 198 ವಾರ್ಡ್‌ಗಳನ್ನು ಜನಸಂಖ್ಯೆ ಆಧಾರದಲ್ಲಿ 243 ವಾರ್ಡ್ಗಳಾಗಿ ವಿಂಗಡಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಇಲಾಖೆಗೆ ಈ ಹಿಂದೆ ವರದಿ ಸಲ್ಲಿಕೆ ಮಾಡಲಾಗಿತ್ತು. ಕೆಲವೊಂದು ಮಾರ್ಪಡುಗಳ ಬಗ್ಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಅಧಿಕೃತವಾಗಿ ವರದಿ ಸಲ್ಲಿಕೆಯಾಗಿದೆ ಎಂದರು.
ಇದನ್ನೂ ಓದಿ: ಉತ್ತರ ಕರ್ನಾಟಕದ ಸಂಜೀವಿನಿ ಕಿಮ್ಸ್ಗೆ ಬೇಕಿದೆ ಅನುದಾನದ 'ಟಾನಿಕ್'