ಬೆಂಗಳೂರು: ಬಿಬಿಎಂಪಿ ಅಧಿನಿಯಮ 2020 ರ ಎಲ್ಲಾ ಉಪಬಂಧಗಳು ಸೋಮವಾರ 11-1-2021 ರಿಂದ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಎ.ಹಿದಾಯತ್ತುಲ್ಲ ಅಧಿಸೂಚನೆ ಹೊರಡಿಸಿದ್ದಾರೆ.
![bbmp new act to be implement : wards will expands](https://etvbharatimages.akamaized.net/etvbharat/prod-images/kn-bng-06-bbmp-new-bill-7202707_08012021190119_0801f_1610112679_836.jpg)
ಬಿಬಿಎಂಪಿ ವಾರ್ಡ್ಗಳನ್ನು 243ಗೆ ಹೆಚ್ಚಿಸುವ ಮರುವಿಂಗಡನೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇನ್ನಷ್ಟು ಚುರುಕಿನಿಂದ ನಡೆಯಲಿದೆ. ಮೇಯರ್ ಮತ್ತು ಉಪಮೇಯರ್ ಅಧಿಕಾರಾವಧಿ ಈಗಿನ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಹೆಚ್ಚಾಗಲಿದೆ. ನೂತನ ಕಾಯ್ದೆಯ ಪ್ರಕಾರ ಬಿಬಿಎಂಪಿ ಸುತ್ತಲೂ ಇರುವ 1 ಕಿಲೋ ಮೀಟರ್ ವ್ಯಾಪ್ತಿಯ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ. ಆ ಮೂಲಕ ಬಿಬಿಎಂಪಿ ವಾರ್ಡ್ಗಳ ಸಂಖ್ಯೆ ಹಾಲಿ ಇರುವ 198ರಿಂದ 243ಕ್ಕೆ ಏರಿಕೆಯಾಗಲಿದೆ.
ಬಿಬಿಎಂಪಿ ಕಾಯ್ದೆಯ ಹೈಲೈಟ್ಸ್:
- ಬಿಬಿಎಂಪಿಗೆ ಪ್ರಸ್ತುತ ಇರುವ ಬಿಬಿಎಂಪಿ ಆಯುಕ್ತ ಹುದ್ದೆಯನ್ನು ಮುಖ್ಯ ಹುದ್ದೆಯಾಗಿ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲದವರನ್ನು ಮುಖ್ಯ ಹುದ್ದೆಗೆ ನೇಮಕ ಮಾಡಲಾಗುವುದು. ಮುಖ್ಯ ಆಯುಕ್ತರ ಅಧಿಕಾರವಧಿ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿಯೋಜನೆ ಮಾಡಬೇಕು. ಅವಧಿಗೆ ಮೊದಲು ವರ್ಗಾವಣೆ ಮಾಡಬೇಕಾದರೆ ಬಿಬಿಎಂಪಿ ಮೇಯರ್ ಅವರಿಗೆ ಕಾರಣಗಳನ್ನು ತಿಳಿಸಬೇಕಾಗಿದೆ.
- ವಿಪತ್ತು ನಿರ್ವಹಣಾ ಸಮಿತಿ ರಚನೆಯಾಗಲಿದೆ. ನಗರದಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಸಮಿತಿ ರಚನೆಯಾಗಲಿದೆ.
- ಪಾಲಿಕೆಯ ವ್ಯಾಪ್ತಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರವಾರು ಹಾಗೂ ವಾರ್ಡ್ನಲ್ಲಿ ‘ಪ್ರಾಂತ್ಯ ಸಭೆ’ಗಳು ಅಥವಾ ಏರಿಯಾ ಸಭಾಗಳ ರಚನೆಯಾಗಲಿದೆ. ಏರಿಯಾ ಸಭಾಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಲಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ. ಇದರಿಂದ ಶಾಸಕರಿಗೆ ಬಿಬಿಎಂಪಿ ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ.
- ಕ್ಷೇತ್ರ ಸಮಾಲೋಚನಾ ಸಮಿತಿಗಳ ರಚನೆ ಮಾಡಲಾಗುವುದು. ಪಾಲಿಕೆ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವಿಧಾನಸಭಾ ಸಮಾಲೋಚನಾ ಸಮಿತಿಯನ್ನು ರಚನೆ ಮಾಡಲಾಗುವುದು. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರೇ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್ಗಳ ಸದಸ್ಯರು ಈ ವಾರ್ಡ್ನಲ್ಲಿ ಸದಸ್ಯರಾಗಿರುತ್ತಾರೆ. ಈ ಸಮಿತಿಯ ಅಧಿಕಾರಾವಧಿ 30 ತಿಂಗಳು ಇರಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಲಯಕ್ಕೂ ಒಂದು ಸಮಿತಿಯನ್ನು ರಚನೆ ಮಾಡಲಾಗುವುದು.
- ಪಾಲಿಕೆಯನ್ನು 15 ವಲಯಗಳನ್ನಾಗಿ ಮರುವಿಂಗಡನೆ ಮಾಡಲಾಗುವುದು. ಪ್ರತಿ ವಲಯಗಳಿಗೂ ಸಮಿತಿ ರಚನೆ ಮಾಡಲಾಗುವುದು.
ಇದನ್ನೂ ಓದಿ:ಹೊಸ ದಾಖಲೆ ಬರೆಯಲಿದ್ದಾರೆ ಮಹಿಳಾ ಪೈಲಟ್ಸ್: ವಿಶ್ವದ ಅತಿ ಉದ್ದದ ವಾಯು ಮಾರ್ಗದಲ್ಲಿ ವಿಮಾನ ಹಾರಾಟ