ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವ ದಿನಾಚರಣೆಗೆ ಗೈರು ಹಾಜರಾಗಿದ್ದ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಒಂದು ದಿನ ವೇತನವನ್ನು ಕಡಿತಗೊಳಿಸಲು ಮೇಯರ್ ಗೌತಮ್ ಕುಮಾರ್ ನಿರ್ಧರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವ ಸಮಾರಂಭಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮತ್ತು ನೌಕರರು ಪ್ರತಿಯೊಬ್ಬರೂ ಹಾಜರಾಗಬೇಕು ಎಂದು ಸೂಚಿಸಿದ್ದೆ. ಆದರೆ, ಆ ಸೂಚನೆಯನ್ನು ಕಡೆಗಣಿಸಿದ ಪಾಲಿಕೆಯ ಕೆಲ ಅಧಿಕಾರಿಗಳು ಮತ್ತು ನೌಕರರು ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಗೈರು ಹಾಜರಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮೇಯರ್, ಗೈರು ಹಾಜರಾದ ಎಲ್ಲಾ ಅಧಿಕಾರಿಗಳ ಒಂದು ದಿನದ ವೇತನವನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.
ಬಳಿಕ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಮಾತನಾಡಿ, ಇದೊಂದು ರೀತಿ ಪಾಲಿಕೆ ಅಧಿಕಾರಿಗಳ ನಿರಾಸಕ್ತಿ. ಎಲ್ಲರೂ ಹಾಜರಾಗುವಂತೆ ಸೂಚಿಸಿದ್ದರೂ ಸಹ ಬಂದಿಲ್ಲ. ಗೈರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.