ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡುವ ಕುರಿತು, ಸ್ವಚ್ಛತೆ ಹಾಗೂ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಯಿತು.
ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ 8 ವಲಯಗಳಲ್ಲಿ ಗಸ್ತು ತಿರುಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪಟಾಕಿ ಮಳಿಗೆಗಳನ್ನಿಟ್ಟಿದ್ದರೆ ತೆರವುಗೊಳಿಸಲು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೂಚಿಸಿದರು. ದೀಪಾವಳಿ ಹಬ್ಬದ ವೇಳೆ ಸಂಭವಿಸುವ ಅಪಘಾತಗಳ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯ 8 ವಲಯಗಳ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ನಿರ್ಮಾಣ ಮಾಡಲು ಅನುವು ಮಾಡಿಕೊಡಬೇಕು. ನಿಯಮ ಬಾಹಿರವಾಗಿ ಮಳಿಗೆ ನಿರ್ಮಿಸಲು ಅನುಮತಿ ಕೊಡಬಾರದು. ಪೊಲೀಸ್ ಇಲಾಖೆ ಪರವಾನಗಿ ನೀಡಿರುವ ಪಟ್ಟಿಯನ್ನು ಪಾಲಿಕೆ ಅಧಿಕಾರಿಗಳು ಪಡೆದು ಮಳಿಗೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಬೇಕು. ಅಲ್ಲದೆ ಮಳಿಗೆಗಳಿಗೆ ನಿಗದಿತ ಸಂಖ್ಯೆಯನ್ನು ನೀಡಬೇಕು ಎಂದು ಸೂಚಿಸಿದ್ರು.
ಇನ್ನು ಮಳಿಗೆಗಳ ಸುತ್ತ ಬ್ಯಾರಿಕೇಡ್, ಬೀದಿ ದೀಪ, ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಿರಬೇಕು ಎಂದು ಸೂಚಿಸಿದರು. ಮೈದಾನದಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಸೂಕ್ತ ಜಾಗ ಗುರುತಿಸಿ ಅಲ್ಲೇ ಹಾಕುವಂತೆ ಕ್ರಮ ಕೈಗೊಳ್ಳಬೇಕು. ಸಂಚಾರ ದಟ್ಟಣೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ನಿಗದಿತ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಸಮಯ ನಿಗದಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಹೇಮಂತ್ ನಿಂಬಾಳ್ಕರ್ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಈ ಸಂಬಂಧ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿಗಳನ್ನು ಹೆಚ್ಚಾಗಿ ಸಂಗ್ರಹಿಸಿಟ್ಟುಕೊಂಡಿರಬೇಕು ಎಂದರು.