ಯಲಹಂಕ : ಯಲಹಂಕದ ಅಟ್ಟೂರು ವಾರ್ಡ್ ಸಾಯಿನಗರ 6ನೇ ಕ್ರಾಸ್ ಬಳಿ ಅಶ್ವಿನ್ ಎಂಬ ಯುವಕ ರಸ್ತೆ ಗುಂಡಿಗೆ ಬಲಿಯಾಗಿದ್ದ. ನಿನ್ನೆ ರಾತ್ರಿ 10 ಗಂಟೆಗೆ ಜಲಮಂಡಳಿ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಅಶ್ವಿನ್ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ದುರದೃಷ್ಟವಶಾತ್ ಅಶ್ವಿನ್ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಇದರಿಂದ ಎಚ್ಚೆತ್ತ ಯಲಹಂಕ ಬಿಬಿಎಂಪಿ ವಲಯದ ಅಧಿಕಾರಿ, ಇಂಜಿನಿಯರ್ಗಳು ಸ್ಥಳಕ್ಕೆ ಆಗಮಿಸಿ ರಸ್ತೆ ಗುಂಡಿಗಳಿಗೆ ಡಾಂಬರು ಹಾಕಿ ಮುಚ್ಚಿದ್ದಾರೆ. ಇದೇ ವೇಳೆ ಆಪ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಅಶ್ವಿನ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ವಿದ್ಯಾರಣ್ಯಪುರ ಪೊಲೀಸರು ಇಲ್ಲಿ ಪ್ರತಿಭಟನೆ ಮಾಡುವುದು ಬೇಡ, ಬೇಕಿದ್ದರೆ ಬಿಬಿಎಂಪಿ ಕಚೇರಿ ಬಳಿ ಪ್ರತಿಭಟನೆ ಮಾಡಿ ಎಂದು ಮನವೊಲಿಸಲು ಯತ್ನಿಸಿದರು.
ಆದರೆ ಬಗ್ಗದ ಆಪ್ ಕಾರ್ಯಕರ್ತರು, ಬಿಬಿಎಂಪಿ ಜಂಟಿ ಆಯುಕ್ತರು ಘಟನಾ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಆಪ್ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಬೆಂಗಳೂರಿನ ರಸ್ತೆಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನ್ರನ್ನು ಈಗ ಕಳೆದುಕೊಂಡಿದ್ದೇವೆ. ಮೃತರ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಘಟನೆಗೆ ಬಿಬಿಎಂಪಿ ಕಮಿಷನರ್ ಹಾಗೂ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಆದ್ದರಿಂದ ಅವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ : ಏಕೈಕ ಪುತ್ರನ ಕಳೆದುಕೊಂಡ ಪೋಷಕರಿಂದ ದೂರು