ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ಯೋಜನೆ ಜಾರಿ ಮತ್ತು ಮಕ್ಕಳಿಂದ ಭಿಕ್ಷಾಟನೆ ಹಾಗೂ ಬೀದಿಗಳಲ್ಲಿ ಮಾರಾಟ ಮಾಡುವವರ ಕುರಿತಂತೆ ಸಮೀಕ್ಷೆ ನಡೆಸುವುದರ ಬಗ್ಗೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಸಭೆ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್ಗಳಿಂದ ಹತ್ತು ಸಾವಿರ ಕಿರು ಸಾಲ ನೀಡುವ ಪ್ರಕ್ರಿಯೆಗೆ ವೇಗ ನೀಡುವ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಸಭೆಯಲ್ಲಿ ತಿಳಿಸಿದರು.
ಬ್ಯಾಂಕ್ ಸಿಬ್ಬಂದಿಗೆ ಸೂಚನೆ:
ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಬರುವ ಆಯಾ ವಾರ್ಡ್ಗಳಲ್ಲಿ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ಕಾರ್ಯ ನಡೆಸಬೇಕು. ಈ ಕಾರ್ಯದಲ್ಲಿ ಗುರುತಿಸಿರುವ ಎಲ್ಲಾ ಬೀದಿ ವ್ಯಾಪಾರಿಗಳಿಗೆ ಕಿರು ಸಾಲ ಪಡೆಯುವ ಅರ್ಜಿಗಳನ್ನು ನೀಡಿ ಭರ್ತಿ ಮಾಡಿಸಿ ಪಿಎಂ ಸ್ವನಿಧಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ಬ್ಯಾಂಕ್ಗಳಿಂದ ತ್ವರಿತವಾಗಿ ಕಿರು ಸಾಲ ಬರುವಂತಾಗಬೇಕು. ಈ ಸಂಬಂಧ ಪಿಎಂ ಸ್ವನಿಧಿ ಯೋಜನೆಯಡಿ ಬಂದಿರುವ ಅರ್ಜಿಗಳಿಗೆ ತ್ವರಿತವಾಗಿ ಸಾಲ ನೀಡಬೇಕು ಎಂದು ಬ್ಯಾಂಕ್ ಸಿಬ್ಬಂದಿಗೆ ಆಯುಕ್ತರು ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 2011 ಜನಗಣತಿ ಪ್ರಕಾರ 85,400 ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಕಿರು ಸಾಲ ನೀಡುವ ಗುರಿಯನ್ನು ಹೊಂದಲಾಗಿದ್ದು, ಪಾಲಿಕೆ ಎಲ್ಲಾ 8 ವಲಯಗಳಲ್ಲಿ ಇದುವರೆಗೆ 64,147 ಅರ್ಜಿಗಳನ್ನು ವಿತರಿಸಿದ್ದು, 39,512 ಅರ್ಜಿಗಳನ್ನು ಭರ್ತಿ ಮಾಡಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ. ಈ ಪೈಕಿ ಎಲ್ಲಾ ವಲಯಗಳಲ್ಲಿಯೂ ಬೀದಿ ಬದಿ ವ್ಯಾಪಾರಿಗಳನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಿ ಅರ್ಜಿಗಳನ್ನು ಭರ್ತಿ ಮಾಡಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.
ಮಕ್ಕಳಿಂದ ಭಿಕ್ಷಾಟನೆ ಹಾಗೂ ಬೀದಿಗಳಲ್ಲಿ ವ್ಯಾಪಾರ ಮಾಡುವವರ ಸಮೀಕ್ಷೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ಬದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ ಮತ್ತು ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಕ್ಕಳನ್ನು ನಿಖರವಾಗಿ ಸಮೀಕ್ಷೆ ನಡೆಸುವ ಸಲುವಾಗಿ ಇಂದು ಮಾಹಿತಿ ಸಂಗ್ರಹಿಸುವ ತಂಡಕ್ಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಕಾರ್ಯಾಗಾರದಲ್ಲಿ ಮಕ್ಕಳು ಭಿಕ್ಷಾಟನೆ ಹಾಗೂ ಬೀದಿಗಳಲ್ಲಿ ವ್ಯಾಪಾರ ಮಾಡುವವರ ಬಳಿ ಮಾಹಿತಿ ಸಂಗ್ರಹಿಸುವುದು. ಯಾವ ಕಾರಣಕ್ಕಾಗಿ ಭಿಕ್ಷಾಟನೆ/ವ್ಯಾಪಾರ ಮಾಡುತ್ತಿದ್ದಾರೆ. ಮಕ್ಕಳ ಬಳಿ ಮಾತನಾಡುವ ವಿಧಾನ ಸೇರಿದಂತೆ ಇನ್ನಿತರೆ ಉಪಯುಕ್ತ ಮಾಹಿತಿಯನ್ನು ನುರಿತ ತಜ್ಞರು ನೀಡಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ನಗರದಲ್ಲಿ ಈಗಾಗಲೇ ಬೀದಿ ಬದಿ ಹಾಗೂ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ಹಾಗೂ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವ 886 ಮಕ್ಕಳನ್ನು ಗುರುತಿಸಲಾಗಿರುತ್ತದೆ. ಅಲ್ಲದೆ ಹೆಚ್ಚು ಭಿಕ್ಷಾಟನೆ/ವ್ಯಾಪಾರ ಮಾಡುವ ಹಾಟ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಬೇಕು. ಮಾಹಿತಿ ಸಂಗ್ರಹಿಸುವ ತಂಡಗಳ ಸಮೀಕ್ಷೆ ಕಾರ್ಯಕ್ಕೆ ವಾಹನಗಳ ವ್ಯವಸ್ಥೆ ಹಾಗೂ ತಿಂಡಿ/ಊಟದ ವ್ಯವಸ್ಥೆ ಮಾಡುವಂತೆ ಆಯುಕ್ತರು ಎಲ್ಲಾ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು. ಅಲ್ಲದೆ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ರವೀಂದ್ರ, ಎಲ್ಲಾ ವಲಯ ಜಂಟಿ ಆಯುಕ್ತರು, ಉಪ ಆಯುಕ್ತರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿ, ಪೊಲೀಸ್ ಸಿಬ್ಬಂದಿ, ವಿವಿಧ ಬ್ಯಾಂಕ್ ಸಿಬ್ಬಂದಿ ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.