ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಹೋಟೆಲ್ ಅಸೋಸಿಯೇಶನ್ ಪದಾಧಿಕಾರಿಗಳ ಜೊತೆ ಜೂಮ್ ಕಾಲ್ ಮೂಲಕ ವರ್ಚುವಲ್ ಸಭೆ ನಡೆಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ಡಿ. ರಂದೀಪ್, ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು ಹಾಗೂ ಹೋಟೆಲ್ ಅಸೋಸಿಯೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಗರದಲ್ಲಿರುವ ಹೋಟೆಲ್‌ಗಳಲ್ಲಿ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಯಲು ಸಹಕರಿಸಬೇಕು ಎಂದು ಆಯುಕ್ತ ಮಂಜುನಾಥ್, ಹೋಟೆಲ್ ಅಸೋಸಿಯೇಶನ್ ಪದಾಧಿಕಾರಿಗಳಿಗೆ ಮನವಿ ಮಾಡಿದರು.
ಹೋಟೆಲ್‌ಗಳಲ್ಲಿ ಅಡುಗೆ ಮಾಡುವವರು, ಊಟ ಬಡಿಸುವವರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಧರಿಸಬೇಕು. ಎಲ್ಲಾ ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸದಿದ್ದರೆ ಹೋಟೆಲ್ ಒಳಗೆ ಬರಲು ಅನುಮತಿ ನೀಡಬಾರದು. ಊಟ ಮಾಡುವ ಅಥವಾ ಕಾಫಿ ಕುಡಿಯುವ ವೇಳೆ ಮಾತ್ರ ಮಾಸ್ಕ್ ತೆರೆಯಲು ಅನುಮತಿ ನೀಡಬೇಕು. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ ಮಾಡಬೇಕು. ಜೊತೆಗೆ ಹೋಟೆಲ್ ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿಡಬೇಕು ಎಂದು ತಿಳಿಸಿದರು.
ಹೋಟೆಲ್‌ನ ಸಿಬ್ಬಂದಿ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇನ್ನು ಪಾಲಿಕೆಯ ತಂಡವು ಎಲ್ಲಾ ಹೋಟೆಲ್‌ಗಳ ಬಳಿ ಬಂದು ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲಿದೆ. ಕೋವಿಡ್ ಸೋಂಕು ಪತ್ತೆಯಾದಲ್ಲಿ ಸೋಂಕು ಪತ್ತೆಯಾದ ವ್ಯಕ್ತಿಯನ್ನು ಕೂಡಲೇ ಐಸೋಲೇಟ್ ಮಾಡಿದಾಗ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ. ಜೊತೆಗೆ ಮುಂಜಾಗ್ರತೆ ವಹಿಸಬಹುದಾಗಿದೆ. ಆದ್ದರಿಂದ ಪ್ರತಿಯೊಂದು ಹೋಟೆಲ್‌ಗಳು ಕೂಡ ಪಾಲಿಕೆಯ ಜೊತೆ ಕೈಜೋಡಿಸಿ ಸಹಕರಿಸಿದಲ್ಲಿ ನಗರದಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣವನ್ನು ತಡೆಯಬಹುದು ಎಂದು ಹೇಳಿದರು.
ರಸ್ತೆ ಬದಿ ಹೋಟೆಲ್‌ಗಳ ಮೇಲೆ ಮಾರ್ಷಲ್‌ಗಳ ನಿಗಾ ವಹಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಹೋಟೆಲ್‌ಗಳು ನಡೆಸುತ್ತಿರುವವರ ಮೇಲೆ ಮಾರ್ಷಲ್‌ಗಳು ನಿಗಾವಹಿಸಲಿದ್ದು, ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದರೆ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
60 ವರ್ಷ ಮೇಲ್ಪಟ್ಟವರು ವ್ಯಾಕ್ಸಿನೇಷನ್ ಪಡೆಯಿರಿ...
ನಗರದ ಎಲ್ಲಾ ಹೋಟೆಲ್‌ಗಳಲ್ಲಿಯೂ 60 ವರ್ಷ ಮೇಲ್ಪಟ್ಟವರು ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಎಲ್ಲರೂ ಲಸಿಕೆ ಪಡೆಯಿರಿ. ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಬಹುದು.
45 ವರ್ಷ ಮೇಲ್ಪಟ್ಟ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೂ 3ನೇ ಹಂತದಲ್ಲಿ ಲಸಿಕೆ ನೀಡುತ್ತಿದ್ದು, ಈ ಪೈಕಿ ಕೇಂದ್ರ ಸರ್ಕಾರವು ವಿವಿಧ ರೀತಿಯ 20 ಕಾಯಿಲೆಗಳಿರುವವರು ಲಸಿಕೆ ಪಡೆಯಬಹುದು ಎಂದು ತಿಳಿಸಿದೆ. ಈ ಪೈಕಿ ಎಲ್ಲರೂ ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.