ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಮಂಡಳಿ ವತಿಯಿಂದ ಜೀವವೈವಿಧ್ಯ ದಾಖಲಾತಿ ಕಾರ್ಯ ನಡೆಯುತ್ತಿದೆ. ಈ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಿ ನಗರದ ಇತರೆಡೆಯೂ ತ್ವರಿತವಾಗಿ ದಾಖಲಾತಿ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ (ರಾಜ್ಯ ಸಚಿವರ ಸ್ಥಾನ) ಅನಂತ ಹೆಗಡೆ ಅಶೀಸರ ತಿಳಿಸಿದರು.
ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿಂತೆ ರಾಜ್ಯಾದ್ಯಂತ ಜು.1ರಿಂದ ಆ.15 ರವೆರೆಗೆ ಪ್ರಚಾರ ಕಾರ್ಯ ನಡೆಸಲಾಗುತ್ತಿದ್ದು, ಅದರ ಅಂಗವಾಗಿ ಬಿಬಿಎಂಪಿಯ ಎಲ್ಲಾ ವಾರ್ಡ್ಗಳಲ್ಲಿಯೂ ನಾಗರೀಕರ ಸಹಭಾಗಿತ್ವದೊಂದಿಗೆ ಸಸಿ ನೆಡುವ, ಕೆರೆಗಳ ಸಮೀಕ್ಷೆ ಹಾಗೂ ರಕ್ಷಣೆ, ಜೀವವೈವಿಧ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸನ್ಮಾನ ಮಾಡುವುದು ಸೇರಿದಂತೆ ಇನ್ನಿತರೆ ಕಾರ್ಯ ಚಟುವಟಿಕೆಗಳನ್ನು ಮಾಡಲು ಕ್ರಮವಹಿಸಲಾಗುವುದು ಎಂದರು.
ನಗರದ ಎಲ್ಲಾ ಉದ್ಯಾನವನಗಳಲ್ಲಿ ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದು, ಕೆರೆಗಳ ಸಂರಕ್ಷಣೆ ಮಾಡುವುದು, ಕೆರೆಯ ಜೌಗು ಪ್ರದೇಶಗಳನ್ನು ಸಮೀಕ್ಷೆ ಮಾಡಿ ರಕ್ಷಣೆ ಹಾಗೂ ನಿರ್ವಹಣೆ ಮಾಡುವುದು. ಪಾಲಿಕೆ ವತಿಯಿಂದ ಈಗಾಗಲೇ ಹಲವಾರು ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಅದರ ಮೂಲ ಸ್ವರೂಪ ಹಾಗೂ ನೈಸರ್ಗಿಕ ಸಂಪನ್ಮೂಲವನ್ನು ಹಾಗೆಯೇ ಉಳಿಸುವಂತಹ ಕೆಲಸವಾಗಬೇಕು. ಅದಕ್ಕೆ ಸ್ಥಳೀಯ ನಾಗರೀಕರು ಕೂಡಾ ಕೈ ಜೋಡಿಸಬೇಕು ಎಂದರು.
ನಗರದಲ್ಲಿರುವ ಅಪರೂಪದ ಜೈವಿಕ ಪ್ರದೇಶಗಳನ್ನು ಗುರುತಿಸಿ ಅದನ್ನು ಪಾರಂಪರಿಕ ತಾಣವನ್ನಾಗಿ ಘೋಷಿಸವ ಕೆಲಸ ಆಗಬೇಕು. ಜೀವವೈವಿದ್ಯ ಉಳಿಸುವ ಅಂಗವಾಗಿ ಯಾವ್ಯಾವು ಯಶಸ್ಸು ಕಂಡಿವೆ ಅದನ್ನು ದಾಖಲಿಸುವಂತಹ ಕೆಲಸವಾಗಬೇಕು. ಅಲ್ಲದೆ ಅರಣ್ಯ ವನೀಕರಣ, ಯಾವ್ಯಾವ ಜಾತಿಯ ಗಿಡಗಳಿವೆ, ನರ್ಸರಿಗಳಲ್ಲಿ ಯಾವ್ಯಾವ ತಳಿಯ ಗಿಡಗಳು ಸಿಗಲಿವೆ ಎಂಬುದರ ಬಗೆಗಿನ ನಿಖರ ಮಾಹಿತಿಯನ್ನು ವೆಬ್‌ಸೈಟ್ ನಲ್ಲಿ ಹಾಕುವ ಕೆಲಸವಾಗಬೇಕು. ಬೆಂಗಳೂರು ಸುತ್ತಲಿನ ಪ್ರದೇಶದಲ್ಲಿ ವನೀಕರಣವನ್ನು ಹೆಚ್ಚಳ ಮಾಡಬೇಕು.
ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಜೀವ ವೈವಿಧ್ಯ ಮಂಡಳಿಯ ಸಮಿತಿ ಜೊತೆಗೆ ಇಂದು ಸಭೆ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಎಲ್ಲೆಲ್ಲಿ ಜೀವ ವೈವಿಧ್ಯ ತಾಣಗಳಿವೆ ಎಂಬುದನ್ನು ಗುರುತಿಸಿ, ದಾಖಲಿಸುವಂತಹ ಕೆಲಸದ ಬಗ್ಗೆ ಚರ್ಚಿಸಲಾಗಿದೆ. ಈ ಸಂಬಂಧ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜೀವ ವೈವಿಧ್ಯ ಉಳಿಸುವ ನಿಟ್ಟಿನಲ್ಲಿ ನಾಗರೀಕರಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.