ಬೆಂಗಳೂರು: "ಕೆ.ಆರ್.ಸರ್ಕಲ್‌ನಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂಡರ್‌ಪಾಸ್‌ಗಳ ಸುರಕ್ಷತೆಯ ಕುರಿತಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಯಾವ ಅಂಡರ್ಪಾಸ್ಗಳೂ ಸದ್ಯಕ್ಕೆ ಮುಚ್ಚುವಂತ ಸ್ಥಿತಿಯಲ್ಲಿ ಇಲ್ಲ. ಕೆ.ಆರ್.ಸರ್ಕಲ್ ಹತ್ತಿರ ಕೆಲಸ ಶುರು ಮಾಡಿದ್ದೇವೆ. ಇತರೆ ಕಡೆಗಳಲ್ಲಿಯೂ ಅಗತ್ಯ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಪಾಲಿಕೆ ಮುಖ್ಯ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸೈರನ್ ಅಳವಡಿಸುವ ಕ್ರಮದ ಕುರಿತು ಸರ್ಕಾರದಿಂದ ವರದಿ ಬರುವುದು ಬಾಕಿ ಇದೆ. ಸದ್ಯಕ್ಕೆ ಒಂದು ಸಿಸಿಟಿವಿ, ಲೈಟ್ಗಳು ಹಾಗೂ ಮ್ಯಾನುವಲ್ ಬ್ಯಾರಿಕೇಡ್ ಅಳವಡಿಸಿದ್ದೇವೆ. ಇವು ಎತ್ತರದಲ್ಲಿದ್ದು ಅಪಾಯ ತಪ್ಪಿಸಲಿವೆ. ಜೊತೆಗೆ, ಬೂಮ್ ಬ್ಯಾರಿಯರ್ ಅನ್ನು ಅಳವಡಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಅಂಡರ್‌ಪಾಸ್‌ಗಳ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಬಾರದು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂಡರ್‌ಪಾಸ್ ಕುರಿತು ಹೆಚ್ಚಿನ ಗಮನ ಹರಿಸಬೇಕು ಹಾಗೂ ಸುರಕ್ಷತೆ ಕಡೆ ಅಧಿಕಾರಿಗಳು ಗಮನ ಹರಿಸಬೇಕು" ಎಂದರು.
ಅಂಡರ್‌ಪಾಸ್‌ಗಳಲ್ಲಿ ನೀರು- ಕ್ರಮ ಕೈಗೊಳ್ಳಲು ಮುಂದಾದ ಪಾಲಿಕೆ: ಕಳೆದ ಮೂರು ದಿನಗಳ ಹಿಂದೆ ನಗರದ ಕೆ.ಆರ್.ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ ಘಟನೆಯ ನಂತರ ಭಾರಿ ಟೀಕೆಗೆ ಒಳಗಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿವೆ 18ಕ್ಕೂ ಹೆಚ್ಚು ಅಪಾಯಕಾರಿ ಅಂಡರ್ಪಾಸ್ಗಳು: ಸಂಚರಿಸುವಾಗ ಹುಷಾರ್
ಪಾಲಿಕೆಯ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಅವರು ಮೂರು ಪುಟಗಳ ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವ ಕುರಿತು ವಿಸ್ತೃತ ಸಲಹೆ, ಕ್ರಮಗಳನ್ನು ಸೂಚಿಸಿದ್ದಾರೆ. ಮುಖ್ಯವಾಗಿ, ಪ್ರವಾಹದ ಸಮಯದಲ್ಲಿ ಅಂಡರ್‌ಪಾಸ್ ಪ್ರವೇಶಿಸುವ ವಾಹನಗಳ ಮೇಲ್ವಿಚಾರಣೆಗಾಗಿ ಸಿಸಿಟಿವಿ ಮತ್ತು ವರ್ಟಿಕಲ್ ಕ್ಲಿಯರೆನ್ಸ್ ಗೇಜ್ ಬೀಮ್ (ವಿಸಿಜಿಬಿ) ಅನ್ನು ಸ್ಥಾಪಿಸಲು ವರದಿ ಶಿಫಾರಸು ಮಾಡಿದೆ. ಈ ಕುರಿತು 15 ದಿನಗಳಲ್ಲಿ ಕಾಮಗಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ರಾಜಧಾನಿಯಲ್ಲಿ ಮಳೆಯ ಅವಾಂತರ.. ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಸಿಎಂ
ಭಾರಿ ಮಳೆಯಿಂದ ಉಂಟಾಗುವ ಪ್ರವಾಹದ ಸಂದರ್ಭದಲ್ಲಿ ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ಗೆ ವಾಹನಗಳ ಪ್ರವೇಶವನ್ನು ತಡೆಯಲು ಬೂಮ್ ತಡೆಗೋಡೆ ಅಳವಡಿಸಬೇಕು. ಮಳೆಯ ನೀರು ಅಂಡರ್‌ಪಾಸ್ ಒಳಗೆ ಪ್ರವೇಶ ಮತ್ತು ನಿರ್ಗಮನ ಮಾಡುವುದನ್ನು ನಿಲ್ಲಿಸಬೇಕು. ನೀರು ನಿಂತ ಸಂದರ್ಭದಲ್ಲಿ ಬೂಮ್ ತಡೆಗೋಡೆಗಳನ್ನು ಟ್ರಾಫಿಕ್ ಪೊಲೀಸರು ನಿರ್ವಹಿಸಬೇಕು. ನೀರು ನಿಲ್ಲಿಸುವುದನ್ನು ತಪ್ಪಿಸಲು ಅದನ್ನು ನೇರವಾಗಿ ಕಾಲುವೆಗೆ ಸಂಪರ್ಕಿಸಬೇಕು. ಅಂಡರ್‌ಪಾಸ್ ಇರುವ ಕಡೆ ವೇಗದ ಮಿತಿಯನ್ನು ಕಡಿಮೆ ಮಾಡುವ ಸಲುವಾಗಿ ಹಂಪ್ಗಳನ್ನು ರೂಪಿಸಬೇಕು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮಳೆ ಅನಾಹುತ: ಕೆ.ಆರ್.ವೃತ್ತ ಅಂಡರ್‌ಪಾಸ್ ಪರಿಶೀಲಿಸಿದ ಡಿಸಿಎಂ ಡಿಕೆಶಿ