ಬೆಂಗಳೂರು : ಬೆಂಕಿ ಅವಘಡ ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಬಿಬಿಎಂಪಿಯಿಂದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿಯನ್ನು ಸಿಎಂ ಹಾಗೂ ಡಿಸಿಎಂ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ನಡೆದ ವಿಶೇಷ ಕವಾಯತಿನ ಪೂರ್ವಸಿದ್ಧತಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ತನಿಖೆಗೆ ನಮ್ಮ ಅಧಿಕಾರಿಗಳು ಸೂಕ್ತ ಸಹಕಾರ ನೀಡುತ್ತಿದ್ದಾರೆ. ಸದ್ಯ ಲ್ಯಾಬ್ನಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಲ್ಯಾಬ್ನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿ ಗ್ರೂಪ್ ನೌಕರ ಲ್ಯಾಬ್ನಲ್ಲಿ ಸಹಾಯ ಮಾಡಬಹುದು. ಆದರೆ ಎಲ್ಲ ಕೆಲಸ ಅವರೇ ಮಾಡುವಂತಿಲ್ಲ. ಒಟ್ಟು ಒಂಬತ್ತು ಜನರಿಗೆ ಗಾಯವಾಗಿದ್ದು, ಯಾರಿಗೂ ಯಾವುದೇ ಅಪಾಯ ಇಲ್ಲ. ಇನ್ನುಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಬಿಬಿಎಂಪಿ ವತಿಯಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಮುಖ ಸುಟ್ಟವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗುವುದು ಎಂದರು.
ಗಾಯಾಳುಗಳಿಗೆ ಚಿಕಿತ್ಸೆ: ಒಂಬತ್ತು ಮಂದಿ ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಆಪರೇಟರ್ ಜ್ಯೋತಿ, ಇಇ ಕಿರಣ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ರಮೇಶ್ ಕೃಷ್ಣ ಹೇಳಿದ್ದಾರೆ.
ಚೀಫ್ ಇಂಜಿನಿಯರ್ ಶಿವಕುಮಾರ್ ಅವರಿಗೆ ಶೇ 25 ರಷ್ಟು ಸುಟ್ಟಗಾಯಗಳಾಗಿವೆ. ಇವರಿಗೆ ಗಂಟಲಿನ ಸಮಸ್ಯೆಯಾಗಿದ್ದು, ಮಾತನಾಡಲು ಕಷ್ಟವಾಗುತ್ತಿದೆ. ಇಇ ಕಿರಣ್ ಸ್ಥಿತಿ ಗಂಭೀರವಾಗಿದ್ದು ಡಯಾಲಿಸಿಸ್ ಮಾಡಲಾಗಿದೆ. ಆಪರೇಟರ್ ಜ್ಯೋತಿ ಅವರ ಮುಖಕ್ಕೆ ಹಾನಿಯಾಗಿದ್ದು, ಉಸಿರಾಟದ ಸಮಸ್ಯೆ ಇದೆ. ಮೂವರಿಗೂ ಇಲ್ಲಿನ ತುರ್ತುನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ತನಿಖೆ: ಅವಘಡ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಆನಂದ್, ಸ್ವಾಮಿ, ಸುರೇಶ್ ಸ್ಟೇಷನ್ ಬೇಲ್ ಮೂಲಕ ಬಿಡುಗಡೆಯಾಗಿದ್ದು, ವಿಚಾರಣೆಗೆ ಕರೆದಾಗ ಮತ್ತೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ತನಿಖೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ಮೂವರ ವಿಚಾರಣೆ