ಬೆಂಗಳೂರು : ಕಳೆದ ವರ್ಷ ಡಿಸೆಂಬರ್ ತಿಂಗಳ ಮಧ್ಯದವರೆಗೆ ಮಳೆ ಕಡಿಮೆಯಾಗಿರಲಿಲ್ಲ. ಮೂರನೇ ವಾರದಿಂದ ಮಾತ್ರ ಕೆಲಸ ಪ್ರಾರಂಭಿಸಲು ಸಾಧ್ಯವಾಯಿತು. ಮಳೆ ತೆರವು ಕಾರ್ಯಾಚರಣೆಯಲ್ಲಿ ರಾಜಕಾಲುವೆಯಿಂದ ಹೂಳೆತ್ತುವ ವೇಳೆ ರಸ್ತೆಯಲ್ಲಿ ಹೂಳು, ಕಸ ಚೆಲ್ಲಿರುವುದು ಬೆಳಕಿಗೆ ಬಂದಿದೆ. ಸದ್ಯ ಏಪ್ರಿಲ್ ಅಂತ್ಯದ ವೇಳೆಗೆ ಹೂಳೆತ್ತುವ ಕಾರ್ಯವನ್ನು ಪೂರ್ಣಗೊಳಿಸಲು ಎಲ್ಲ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಪಾಲಿಕೆ ಕೇಂದ್ರ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಕಾಡುಬೀಸನಹಳ್ಳಿಯಲ್ಲಿ ಬಿ.ಎಂ.ಆರ್.ಸಿ.ಎಲ್ ಕಾಮಗಾರಿ ಕೂಡಾ ನಡೆಯುತ್ತಿದೆ. ಡ್ರೈನೇಜ್ ಪೈಪ್ ಗಳು ಡ್ಯಾಮೇಜ್ ಆಗಿವೆ. ಇದನ್ನು ಸರಿಪಡಿಸಲು 15 ದಿನ ಕಾಲಾವಕಾಶ ಬೇಕಿದೆ. ಸದ್ಯ ಪಂಪ್‌ಗಳನ್ನು ಬಳಸಿ ನೀರು ಸರಾಗವಾಗಿ ಹರಿಯುವ ಹಾಗೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇಂದು ಅಧಿಕಾರಿಗಳ ಜೊತೆ ಈ ಕುರಿತು ಮಾತನಾಡಿದ್ದೇನೆ. ರಾಜಕಾಲುವೆ ಡ್ರೈನ್ ಪೈಪ್ ಗಳನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಕೆಲಸ ನಿರ್ವಹಿಸಲಾಗುತ್ತಿದೆ. 670 ಕಿ.ಮಿ ಉದ್ದದ ಕಾಲುವೆಯ ಸ್ವಚ್ಛತೆಯನ್ನು ಏಪ್ರಿಲ್ ಅಂತ್ಯದ ವೇಳೆಗೆ ಮುಗಿಸಬೇಕು ಎಂದು ಸೂಚಿಸಿದ್ದೇನೆ ಎಂದರು.
ಮೇ, ಜೂನ್, ಜುಲೈ ತಿಂಗಳಿನಲ್ಲಿ ಮತ್ತೊಂದು ಸುತ್ತಿನ ಸ್ವಚ್ಚತೆ ಕಾರ್ಯ ಮಾಡಲಾಗುತ್ತದೆ. ಈ ಬಾರಿಯ ಮಳೆಗೆ ಅಷ್ಟು ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. 2000 ಕೋಟಿ ವೆಚ್ಚದಲ್ಲಿ 170 ಕಿಲೋಮೀಟರ್ ಉದ್ದದ ವಾರ್ಡ್ ಮಟ್ಟದ ಕಾಲುವೆಗಳ ಸ್ವಚ್ಛತೆ ನಡೆಯುತ್ತಿದೆ. ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗಿರುವ ಕಾಲುವೆಗಳ ಸ್ವಚ್ಛತೆಗೆ ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಝೋನಲ್ ಕಂಟ್ರೋಲ್ ರೂಮ್ ನಲ್ಲಿ ಕೂಡ ಅಗತ್ಯ ಕ್ರಮ ಕೈಗೊಳ್ಳಲು ಅಭಿಯಂತರರು ಇರಲಿದ್ದಾರೆ. ಕೆಲ ಅಭಿಯಂತರರನ್ನು ಚುನಾವಣಾ ಕೆಲಸ ಕಾರ್ಯಕ್ಕೆ ತೆಗೆದುಕೊಳ್ಳಲಾಗಿದೆ. ಅಭಿಯಂತರರಿಗೆ ಪ್ರತ್ಯೇಕ ವಾಹನ ಸೌಲಭ್ಯ ನೀಡಲಾಗಿದೆ. ಅವರು ಚುನಾವಣಾ ಕೆಲಸದ ಜೊತೆಗೆ ರಾಜಕಾಲುವೆಯ ಕೆಲಸವನ್ನು ಸಹ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಗೆ 200 ಸ್ಥಳಗಳನ್ನು ಗುರುತಿಸಿ ವರದಿ ನೀಡಿದ್ದೇವೆ. ಒಡಂಬಡಿಕೆ ಕೂಡ ಮಾಡಿಕೊಳ್ಳಲಾಗಿದೆ. ಅವರು ಕೂಡ ಮಳೆ ಬಂದಾಗ ಚಾರ್ಟ್ ತಯಾರು ಮಾಡಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪಾಲಿಕೆ ಕೆ.ಎಸ್.ಎನ್.ಡಿ.ಎಂ.ಸಿ ಅಧಿಕಾರಿಗಳು ಜಂಟಿಯಾಗಿ ಮಳೆ ನಿರ್ವಹಣೆಯ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಪರಿಸ್ಥಿತಿ ನಿಭಾಯಿಸಲು ಮೇಲ್ವಿಚಾರಕರನ್ನು ನಿಯೋಜಿಸಿ : ಮಳೆಗಾಲದಲ್ಲಿ ಪರಿಸ್ಥಿತಿ ನಿಭಾಯಿಸಲು ರಾಜ್ಯ ವಿಪತ್ತು ಸ್ಪಂದನಾ ದಳದಿಂದ (ಎಸ್‌ಡಿಆರ್‌ಎಫ್) ಬಿಬಿಎಂಪಿಯ ಎಂಟೂ ವಲಯಗಳಿಗೂ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಆಯಾ ವಲಯದ ಜಂಟಿ ಆಯುಕ್ತರ ಜೊತೆ ಸಮನ್ವಯ ಕಾಪಾಡಿಕೊಂಡು ಅವರು ಕಾರ್ಯನಿರ್ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.
ನಗರದಲ್ಲಿ ಮಳೆಗಾಲದ ವೇಳೆ ಬಿಬಿಎಂಪಿ, ಎಸ್‌ಡಿಆರ್‌ಎಫ್, ಬೆಸ್ಕಾಂ, ಜಲಮಂಡಳಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಮಳೆಗಾಲದಲ್ಲಿ ಮನೆ ಜಲಾವೃತವಾಗುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ಮರ ಹಾಗೂ ರೆಂಬೆ-ಕೊಂಬೆಗಳು ಉರುಳಿ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಸಂತ್ರಸ್ತರಿಗೆ ತ್ವರಿತ ಸ್ಪಂದನೆ ನೀಡಬೇಕು. ನೆರವು ಒದಗಿಸುವ ಸಿಬ್ಬಂದಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಅತಿವೃಷ್ಟಿ ಸಂಭವಿಸಬಹುದಾದ ಪ್ರದೇಶಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು ಮತ್ತು ಹವಾಮಾನ ಮತ್ತು ಮಳೆ ಪರಿಸ್ಥಿತಿಯ ಬಗ್ಗೆ ವರುಣಮಿತ್ರ ವೆಬ್ ಸೈಟ್ ನಲ್ಲಿ ಪ್ರತಿದಿನ ದಾಖಲಿಸುವಂತೆ ಸೂಚಿಸಲಾಯಿತು. ಸಭೆಯಲ್ಲಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಡಾ. ಮನೋಜ್ ರಾಜನ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಕೆಎಎಸ್ ಹುದ್ದೆ ಸೃಜನೆ ಮಾಡಿ ಡಾ ಮೈತ್ರಿ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ