ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಅಲ್ಲದೆ ವೈದ್ಯರ ಕೊರತೆ ಇದೆ ಎಂಬುದನ್ನು ಸ್ವತಃ ಸರ್ಕಾರ ಕೂಡ ಒಪ್ಪಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ವತಿಯಿಂದ ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಬೆಳಗ್ಗೆಯಿಂದ ನಗರದ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್)ದಲ್ಲಿ ವಾಕ್-ಇನ್-ಸಂದರ್ಶನದಲ್ಲಿ ವೈದ್ಯರು, ದಂತ ವೈದ್ಯರು, ಆಯುಷ್ ವೈದರು, ಸ್ಟಾಫ್ ನರ್ಸ್ , ಸಹಾಯಕ ಸಿಬ್ಬಂದಿ, ಹಾಗೂ ನಾಲ್ಕನೇ ದರ್ಜೆ ಸಿಬ್ಬಂದಿಯನ್ನು ಆಯ್ಕೆ ಮಾಡಲಾಯಿತು.
ಒಟ್ಟಾರೆ 94 ವೈದ್ಯರು, 86 ಇತರೆ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ. ವೈದ್ಯಕೀಯ, ಅರೆ ವೈದ್ಯಕೀಯ, ಇತರೆ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಇಂದು 180 ವೈದ್ಯರು, ಅರೆವೈದ್ಯಕೀಯ ಸಹಾಯಕರು, ನಾಲ್ಕನೇ ದರ್ಜೆ ನೌಕರರುಗಳನ್ನು ಸ್ಥಳದಲ್ಲೆ ಆಯ್ಕೆ ಮಾಡಿ ಅವರಿಗೆ ಆದೇಶ ಪತ್ರ ನೀಡಲಾಗಿದೆ.
ಅಲ್ಲದೆ ಇಂದು ಆಯ್ಕೆಯಾದ ಎಲ್ಲರನ್ನು ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಆರೈಕಾ ಕೇಂದ್ರದಲ್ಲಿ ನಿಯೋಜಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತರು (ಆಡಳಿತ) ತಿಳಿಸಿದ್ದಾರೆ.