ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಅಧಿಕಾರಿಗಳು ಮತ್ತು ನೌಕರರ ಸಾಮಾನ್ಯ ವೃಂದ ಮತ್ತು ನೇಮಕಾತಿ) ಕಾಯ್ದೆ-2018 ಸೆಕ್ಷನ್ 4(ಎ) ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತರಾಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎನ್ ಕೆ ಸುಧಿಂದ್ರರಾವ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲ ವಿ ಶ್ರೀನಿವಾಸ್ ವಾದ ಆಲಿಸಿದ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( ಅಧಿಕಾರಿಗಳು ಮತ್ತು ನೌಕರರ ಸಾಮಾನ್ಯ ವೃಂದ ಹಾಗೂ ನೇಮಕಾತಿ) ಕಾಯ್ದೆ-2018 ನ್ನು ಸರ್ಕಾರ 2018 ರ ಜುಲೈ ನಾಲ್ಕರಂದು ಪ್ರಕಟಿಸಿತ್ತು. ಈ ಕುರಿತು ಆಕ್ಷೇಪಣೆಗಳನ್ನು ಆಲಿಸಲು ಸಮಿತಿ ರಚಿಸಲಾಗಿತ್ತು. ಅರ್ಜಿದಾರರು ಆಕ್ಷೇಪಣೆ ಎತ್ತಿದ್ದರೂ, ಅದನ್ನು ಪರಿಗಣಿಸದೆ ತಿದ್ದುಪಡಿ ನಿಯಮಗಳಿಗೆ ಅನುಮೋದನೆ ನೀಡಲಾಗಿದೆ ಎಂಬುದು ಅರ್ಜಿದಾರರ ಆರೋಪ.
ವಿವಾದವೇನು?: ಕಾಯ್ದೆಯ ಸೆಕ್ಷನ್ 4 (ಎ) ಪ್ರಕಾರ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುವ ಎ ಗ್ರೂಪ್ ಅಧಿಕಾರಿಗಳು ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿದರು, ಅವರ ನೇಮಕಾತಿ ನಿಯೋಜನೆ ವೇತನ ವರ್ಗಾವಣೆ ಎಲ್ಲವೂ ಪಾಲಿಕೆ ಆಯುಕ್ತರ ಬದಲಿಗೆ ನೇರವಾಗಿ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಇಂತಹ ನಿಯಮ ಪಾಲಿಕೆಯ ಆಡಳಿತ ನಿರ್ವಹಣೆ ದೃಷ್ಟಿಯಿಂದ ಸರಿಯಾದದ್ದಲ್ಲ. ಆದ್ದರಿಂದ 4 (ಎ) ರದ್ದುಗೊಳಿಸಬೇಕು ಎಂಬುದು ಅರ್ಜಿದಾರರ ಮನವಿ.