ಬೆಂಗಳೂರು : ಕೆಎಂಸಿ ಕಾಯ್ದೆಯ, ಜಾಹಿರಾತು ಬೈಲಾದಲ್ಲಿ ನಗರದಲ್ಲಿ ನಿಷೇಧವಾಗಿದ್ದ ಜಾಹಿರಾತು ಪ್ರದರ್ಶನವನ್ನು ಮತ್ತೆ ತರಲು ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಸುಳಿವು ನೀಡಿದ ಆಯುಕ್ತರು, ಹೊಸ ಕಾಯ್ದೆ ಜಾಹಿರಾತಿಗೆ ಅನುಮತಿ ನೀಡಿರುವುದರಿಂದ ಬೈಲಾವನ್ನು ತಿದ್ದುಪಡಿ ಮಾಡಬೇಕಿದೆ ಎಂದರು.
ಪಾಲಿಕೆಗೆ ಪ್ರತ್ಯೇಕ ಕಾಯ್ದೆ ಬೇಕೆಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಸರ್ಕಾರದ ಎರಡೂ ಸದನಗಳಲ್ಲಿ ಅನುಮೋದನೆಗೊಂಡು ರಾಜ್ಯಪಾಲರ ಅಂಕಿತವನ್ನೂ ಪಡೆದ ಬಳಿಕ ಇಂದಿನಿಂದ ಹೊಸ ಕಾಯ್ದೆ ಜಾರಿಗೆ ತರಲು ಸರ್ಕಾರ ಆದೇಶಿಸಿದೆ. ಹೊಸ ಕಾಯ್ದೆ ಇಂದಿನಿಂದ ಜಾರಿಗೆ ಬರುತ್ತಿರುವುದರಿಂದ ಅನೇಕ ಕೆಲಸಗಳನ್ನು ಇನ್ನು ಮುಂದೆ ಮಾಡಲಿದ್ದೇವೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಹೊಸ ಪ್ರದೇಶ ಸೇರ್ಪಡೆ ಬಳಿಕ ಜನಸಂಖ್ಯೆ ಆಧಾರಿತ ವಾರ್ಡ್ ರಚನೆ : ನಗರಕ್ಕೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುವ ಬಗ್ಗೆ ವಾರ್ಡ್ ಪುನರ್ ರಚನೆ ಸಮಿತಿ ಸರ್ಕಾರ ನೀಡುವ ಕಾಲಾವಧಿಯೊಳಗೆ ವಾರ್ಡ್ ಪುನರ್ ರಚನೆ ಮಾಡಿ, ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಆಯುಕ್ತರು, 198 ವಾರ್ಡ್ಗಳನ್ನು 243ಕ್ಕೆ ಏರಿಕೆ ಮಾಡಲಾಗುವುದು.
ಹೊಸ ಕಾಯ್ದೆ ಪ್ರಕಾರ ಕನಿಷ್ಟ 225, ಗರಿಷ್ಟ 251 ವಾರ್ಡ್ ಇರಬಹುದಾಗಿದೆ. ಆದರೆ, 243 ವಾರ್ಡ್ಗಳನ್ನು ಮಾಡಲು ನಿರ್ಧರಿಸಲಾಗಿದೆ. ಪಾಲಿಕೆ ಗಡಿಯಿಂದ ಒಂದು ಕಿ.ಮೀ ವ್ಯಾಪ್ತಿಯ ಹೊಸ ಪ್ರದೇಶವನ್ನೂ ಸೇರಿಸಲಾಗುವುದು. ಹೊಸ ಪ್ರದೇಶಗಳನ್ನೂ ಸೇರಿಸಿದ ಬಳಿಕ ಒಟ್ಟು ಎಷ್ಟು ಜನಸಂಖ್ಯೆ ಇರುತ್ತದೆಯೋ, ಆ ಜನಸಂಖ್ಯೆಯನ್ನು ಸಮಾನವಾಗಿ ಇರುವಂತೆ ವಾರ್ಡ್ ಮರುವಿಂಗಡನೆ ಮಾಡಲಾಗುವುದು ಎಂದರು.
ಓದಿ...ಈ ಬಾರಿಯ ಬಜೆಟ್ ಮಂಡನೆ ಪ್ರಕ್ರಿಯೆಯಲ್ಲಿ ಐತಿಹಾಸಿಕ ಬದಲಾವಣೆ.. ಏನದು?
ವಲಯಗಳ ಹೆಚ್ಚಳ : ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 8 ವಲಯಗಳಿವೆ. ಇದನ್ನು ಗರಿಷ್ಠ 15 ವಲಯಗಳನ್ನಾಗಿಯೂ ಮಾಡಬಹುದಾಗಿದೆ. ಎಷ್ಟು ವಲಯಗಳಿರಬೇಕೆಂದು ನಿರ್ಧರಿಸಲು ಝೋನಲ್ ಡಿಮಾರ್ಕೇಶನ್ ಕಮಿಷನ್ ರಚನೆ ಮಾಡುವ ಅವಕಾಶ ಕಾಯ್ದೆಯಲ್ಲಿದೆ. ಇದನ್ನು ರಚನೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಿದ್ದೇವೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.
ಮುಖ್ಯ ಆಯುಕ್ತರಿಂದಲೇ ವಾರ್ಡ್ ಕಮಿಟಿ ಸದಸ್ಯರ ನೇಮಕ : ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿರುವ ವಾರ್ಡ್ ಕಮಿಟಿಗಳಲ್ಲಿ ಇಬ್ಬರು ಪರಿಶಿಷ್ಠ ಜಾತಿ, ಪಂಗಡದವರು, 3 ಜನ ಮಹಿಳೆಯರು, ಇಬ್ಬರು ಸ್ಥಳೀಯ ನಾಗರಿಕರ ಕಲ್ಯಾಣ ಸಂಘದ ಸದಸ್ಯರು ಇರಬೇಕೆಂದಿದೆ. ಇವರೆಲ್ಲರನ್ನು ಚೀಫ್ ಕಮಿಷನರ್ ನೇಮಕ ಮಾಡ್ತಾರೆ ಎಂದು ಕಾಯ್ದೆಯಲ್ಲಿದೆ. ಈ ಹಿಂದೆ ಕೆಎಂಸಿ ಆ್ಯಕ್ಟ್‌ನಲ್ಲಿ ಪಾಲಿಕೆ ನೇಮಕ ಎಂದಿತ್ತು. ಈಗ ಚೀಫ್ ಕಮಿಷನರ್ ನೇಮಕ ಮಾಡುತ್ತಾರೆ ಎಂಬುದಿದೆ.
ಬಿಬಿಎಂಪಿಯಲ್ಲಿ ಹೊಸದಾಗಿ ರಚನೆ ಆಗಲಿದೆ ಏರಿಯಾ ಸಭಾ?: ಇದಲ್ಲದೆ ಪಾಲಿಕೆ ಪ್ಯಾಪ್ತಿಯಲ್ಲಿ 7,500 ಮತಗಟ್ಟೆಗಳಿದ್ದು, ಒಂದು ಪೋಲಿಂಗ್ ಸ್ಟೇಷನ್ಗೆ ಏರಿಯಾ ಸಭಾ ಎಂದು ಮಾಡಬಹುದಾಗಿದೆ. ಕನಿಷ್ಟ ಮೂರರಿಂದ ಗರಿಷ್ಠ 5 ಮತಗಟ್ಟೆಗಳನ್ನು ಒಟ್ಟು ಸೇರಿಸಿಯೂ ಒಂದು ಏರಿಯಾ ಸಭಾ ಮಾಡಬಹುದಾಗಿದೆ. ಈ ಏರಿಯಾ ಸಭಾಕ್ಕೆ ಜನಪ್ರತಿನಿಧಿಯೊಬ್ಬರನ್ನು ಚೀಫ್ ಕಮಿಷನರ್ ನೇಮಕ ಮಾಡಲಿದ್ದಾರೆ ಎಂದರು.
ಜಾಹೀರಾತು : ಜಾಹೀರಾತಿಗೆ ಸಂಬಂಧಿಸಿದಂತೆ, ಆ್ಯಕ್ಟ್‌ನಲ್ಲಿ ಆಯುಕ್ತರ ಅನುಮತಿಯಿಂದ ಜಾಹೀರಾತು ಹಾಕಬಹುದು ಎಂದಿದೆ. ಹೀಗಾಗಿ, ಜಾಹೀರಾತು ಬೈಲಾವನ್ನು ಬದಲಾವಣೆ ಮಾಡಬೇಕಿದೆ. ಯಾಕಂದ್ರೆ, ಬೈಲಾ ಮುಂದೆ ಆ್ಯಕ್ಟ್ ಪ್ರಾಮುಖ್ಯತೆ ಪಡೆಯಲಿದೆ. ಬೈಲಾದಲ್ಲಿ ಬದಲಾವಣೆ ತರಲು ಸರ್ಕಾರದ ಗಮನಕ್ಕೆ ತಂದು, ಸರ್ಕಾರ ಒಪ್ಪಿಗೆ ಸೂಚಿಸಬೇಕಾಗಿದೆ ಎಂದರು. ಹೊಸ ಬಿಲ್ಡಿಂಗ್ ಬೈಲಾ ಕೂಡ ಹೊಸ ಕಾಯ್ದೆಯಡಿ ಬರಲಿದೆ ಎಂದರು.