ಬೆಂಗಳೂರು : ರಾಜ್ಯದಲ್ಲಿ ಲಿಂಗಾಯತರಿಗೆ ಅಭಿವೃದ್ಧಿ ಪ್ರಾಧಿಕಾರದ ಬದಲಾಗಿ ಮೀಸಲಾತಿ ಕಲ್ಪಿಸಬೇಕೆಂದು ವಿಧಾನ ಪರಿಷತ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 1.18 ಕೋಟಿ ಜನಸಂಖ್ಯೆ ಹೊಂದಿರುವ ಲಿಂಗಾಯತರು ಈ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಲಿಂಗಾಯತರು ಆರ್ಥಿಕ, ಸಾಮಾಜಿಕವಾಗಿ ಅತೀ ಕನಿಷ್ಠ ಮಟ್ಟದಲ್ಲಿದ್ದಾರೆ.
ಇವರ ಸರ್ವತೋಮುಖ ಅಭಿವೃದ್ಧಿಗಾಗಿ ಶೇ.18 ರಷ್ಟು ಮೀಸಲಾತಿ ಸೌಲಭ್ಯವನ್ನು ಸರ್ಕಾರದಿಂದ ಒದಗಿಸಬೇಕು. ಅಂದರೆ ಮಾತ್ರ ಇವರು ಅಭಿವೃದ್ಧಿ ಹೊಂದಲು ಸಾಧ್ಯ. ಇಲ್ಲದೇ ಹೋದರೆ ರಾಜ್ಯದ ಲಿಂಗಾಯತರ ಸ್ಥಿತಿ ಗಂಭೀರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
![Basavaraj Horatti writes strong letter to BSY on Lingayat's demand](https://etvbharatimages.akamaized.net/etvbharat/prod-images/kn-bng-06-basavaraja-horatti-letter-to-cm-script-7208083_17112020173024_1711f_1605614424_121.jpg)
ಕೆಲವು ಮಂತ್ರಿಗಳು ಇದೀಗ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿನಂತಿಸಿದ್ದಾರೆ. ಆದರೆ, ಬಹುದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ 500 ಕೋಟಿ ರೂ. ಅನುದಾನ ನೀಡಿದರೂ ಲಿಂಗಾಯತ ಅಭಿವೃದ್ಧಿ ನಿಗಮದ ಅನುದಾನ ಯಾವುದಕ್ಕೂ ಸಾಲದು. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲವೆಂದು ಅಂಕಿ ಅಂಶಗಳ ಸಮೇತ ವಿವರ ನೀಡಿದ್ದಾರೆ.
![Basavaraj Horatti writes strong letter to BSY on Lingayat's demand](https://etvbharatimages.akamaized.net/etvbharat/prod-images/kn-bng-06-basavaraja-horatti-letter-to-cm-script-7208083_17112020173024_1711f_1605614424_98.jpg)
ಲಿಂಗಾಯತರಿಗೆ ಅಭಿವೃದ್ಧಿ ನಿಗಮಕ್ಕಿಂತ ಮೀಸಲಾತಿ ನೀಡಿದರೇ ಅವರ ಎಲ್ಲಾ ರೀತಿಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಮರಾಠಿಗರಿಗೆ ನೀಡಿದಂತೆ ಕರ್ನಾಟಕ ಸರ್ಕಾರ ಲಿಂಗಾಯತರಿಗೆ ಜನಸಂಖ್ಯೆಗೆ ಅನುಗುಣವಾಗಿ ಶೇ.18ರಷ್ಟು ಮೀಸಲಾತಿಯನ್ನು ಸರ್ಕಾರಿಂದ ಎಲ್ಲಾ ವಿಭಾಗಗಳಲ್ಲಿಯೂ ನೀಡಬೇಕು.
ಆ ಮೂಲಕ ಲಿಂಗಾಯತರ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು. ಅಲ್ಲದೇ ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ಲಿಂಗಾಯತ ಸಮಾಜವನ್ನು ಸೇರಿಸಲು ಕ್ರಮಕೈಗೊಳ್ಳಬೇಕು ಎಂದು ಹೊರಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಒಂದು ಪಕ್ಷದಲ್ಲಿ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವುದೇ ಆದಲ್ಲಿ ಕನಿಷ್ಟ ₹5,000 ಕೋಟಿ ಅನುದಾನ ಮೀಸಲಿರಸಬೇಕು ಎಂದು ಕೋರುತ್ತೇನೆ. ಯಾಕೆಂದರೆ, ಮೇಲಿನ ಕೋಷ್ಠಕದಂತೆ ಕನಿಷ್ಠ ಶೇ. 25 ರಷ್ಟು ಜನರಿಗಾದರೂ ಇದರ ಸೌಲಭ್ಯ ದೊರೆಯಲಿ ಅನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಹೇಳಿದ್ದಾರೆ.
![Basavaraj Horatti writes strong letter to BSY on Lingayat's demand](https://etvbharatimages.akamaized.net/etvbharat/prod-images/kn-bng-06-basavaraja-horatti-letter-to-cm-script-7208083_17112020173024_1711f_1605614424_23.jpg)