ಬೆಂಗಳೂರು: ಸಿದ್ದರಾಮಯ್ಯ ಕಟು ಸತ್ಯ ಎದುರಿಸುವ ಕಾಲ ಬಂದಿದೆ. ಅಕ್ರಮದ ಬಗ್ಗೆ ತನಿಖೆ ಮಾಡುತ್ತೇವೆ. ಅರ್ಕಾವತಿ ಬಡಾವಣೆ ರೀ-ಡೂ ಬಗ್ಗೆ ಬೊಮ್ಮಾಯಿ ಹೇಳ್ತಿರೋದಲ್ಲ, ನ್ಯಾ.ಕೆಂಪಣ್ಣ ಆಯೋಗ ಹೇಳಿರೋದು. ನಾನು ಸುಳ್ಳು ಹೇಳ್ತಿಲ್ಲ, ಅವರು ಸುಳ್ಳು ಹೇಳ್ತಿರೋದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಕೆ.ಸಿ.ರೆಡ್ಡಿ ಕಂಚಿನ ಪ್ರತಿಮೆ ಅನಾವರಣ ಮಾಡಿ ಬಳಿಕ ಮಾತನಾಡಿದ ಅವರು, ಕಮಿಷನ್ ರಿಪೋರ್ಟ್ ಅನ್ನು ನಾನು ಓದಿದ್ದೇನೆ. ಅವರೇ ನೇಮಿಸಿದ ಸಮಿತಿ ಈ ಕುರಿತು ಸುದೀರ್ಘವಾಗಿ ತನಿಖೆ ಮಾಡಿ ವರದಿ ಕೊಟ್ಟಿದೆ. ನ್ಯಾ.ಕೆಂಪಣ್ಣ ವರದಿ ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್ ಸುಳ್ಳು ಹೇಳ್ತಿರೋದು, ಅಧಿಕಾರಿಗಳನ್ನು ತೆಗೆದುಕೊಂಡು ಬಂದಿರುವುದಕ್ಕೆ ನಾನು ಅನುಮೋದಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಅರ್ಥ ಏನು?. ಅವರು ತಪ್ಪು ಮಾಡಿದ್ದಾರೆ ಎಂದು ಅರ್ಥ ಅಲ್ಲವಾ?. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅಕ್ರಮದ ಬಗ್ಗೆ ತನಿಖೆ ಮಾಡಿಸ್ತೀವೆ. ನಾವು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೇವೆ ಎಂದು ತಿಳಿಸಿದರು.
ಇದೇ ವೇಳೆ, ಲೋಕಾಯುಕ್ತ ಸಂಸ್ಥೆ ಮುಚ್ಚಿರುವ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, 'ಅಡ್ವೊಕೇಟ್ ಜನರಲ್ ವಾದದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಅಡ್ವೊಕೇಟ್ ಜನರಲ್ ವಾದ ಮಾಡಿದ ಮೇಲೆ ನ್ಯಾಯಾಧೀಶರು ಏನು ಹೇಳಿದ್ದಾರೆ? ಅದು ಮುಖ್ಯ. ತೀರ್ಪು ಏನು ಹೇಳಿದ್ದಾರೆ, ತೀರ್ಪು ಮುಖ್ಯ. ನಮಗೆ ಬೇಕಾದ ಹಾಗೆ ವಾದ ಮಾಡಿಕೊಳ್ಳುತ್ತೇವೆ. ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರ ರಕ್ಷಣೆಗೆ, ಜನಪ್ರತಿನಿಧಿಗಳ ರಕ್ಷಣೆಗೆ ಎಸಿಬಿ ಮಾಡಿದ್ರು ಅಂತ. ಬಹಳ ಸ್ಪಷ್ಟವಾಗಿ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಹೇಳಿದ್ದಾರೆ. ಅದನ್ನೇ ನಾನು ಹೇಳಿರೋದು. ನ್ಯಾಯಮೂರ್ತಿಗಳ ತೀರ್ಪು ಓದಿದ್ದೇನೆ. ಕೆಂಪಣ್ಣ ಕಮಿಷನ್ ರಿಪೋರ್ಟ್ ಕೂಡ ಓದಿದ್ದೇನೆ. ಅಕ್ರಮ ಆಗಿರೋದು ಕಟು ಸತ್ಯ ಎಂದು ವಾಗ್ದಾಳಿ ನಡೆಸಿದರು.
ಕೆ ಸಿ ರೆಡ್ಡಿ ಕಂಚಿನ ಪ್ರತಿಮೆ ಅನಾವರಣ: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಪ್ರಥಮ ಸಿಎಂ ಕೆ.ಸಿ. ರೆಡ್ಡಿ ಅವರ ಕಂಚಿನ ಪ್ರತಿಮೆ ಅನಾವರಣ ಮಾಡಿದರು. ಈ ವೇಳೆ ಸಚಿವರಾದ ಆನಂದ್ ಸಿಂಗ್, ಸುಧಾಕರ್, ರಾಮಲಿಂಗಾರೆಡ್ದಿ ಸೇರಿ, ಕೆ.ಸಿ.ರೆಡ್ಡಿ ಸಂಬಂಧಿಕರು ಪಾಲ್ಗೊಂಡಿದ್ದರು. 2018ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ ಸಿ ರೆಡ್ಡಿಯವರ ಫೈಬರ್ ಪ್ರತಿಮೆ ಅನಾವರಣ ಗೊಳಿಸಿದ್ದರು. ಕೆಸಿ ರೆಡ್ಡಿ ಕುಟುಂಬದ ಒತ್ತಾಯಕ್ಕೆ ಮಣಿದು ಪ್ರತಿಮೆ ಸ್ಥಾಪಿಸಲಾಗಿತ್ತು. ಕಂಚಿನ ಪ್ರತಿಮೆಯನ್ನು ಭವಿಷ್ಯದಲ್ಲಿ ಸ್ಥಾಪಿಸಲಾಗುವುದು ಎಂದು ಆ ಸಂದರ್ಭದಲ್ಲಿ ಭರವಸೆ ನೀಡಲಾಗಿತ್ತು. ಅಲ್ಲಿಂದೀಚೆಗೆ ಕೆಸಿ ರೆಡ್ಡಿಯವರ ಕುಟುಂಬ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಧರಣಿ ನಡೆಸಿ ಒತ್ತಾಯಿಸಿದ್ದರು. ಇದೀಗ, ಕೆ.ಸಿ ರೆಡ್ಡಿಯವರ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.
ಪ್ರತಿಮೆ ಅನಾವರಣದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕರ್ನಾಟಕದ ಮೊದಲ ಸಿಎಂ ರೆಡ್ಡಿ ಅವರು ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕದ ಅಭಿವೃದ್ಧಿಗೆ ಸಾಕಾರ ಹಾಕಿಕೊಟ್ಟರು. ರೈತ ಕುಟುಂಬದಿಂದ ಬಂದವರು. ವಕೀಲರಾಗಿ ಪತ್ರಕರ್ತರಾಗಿ ಸಮಾಜದ ಎಲ್ಲಾ ಆಯಾಮ ತಿಳಿದುಕೊಂಡಿದ್ದರು. ಕೇಂದ್ರದಲ್ಲಿ ಮಂತ್ರಿ ಆಗಿದ್ದರು. ಕರ್ನಾಟಕ ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ಇತ್ತು. ಭವಿಷ್ಯದ ನಾಡು ಕಟ್ಟಲು ಬೇಕಾದ ಕೆಲಸ ಮಾಡಿದ್ರು. ಪ್ರಾಮಾಣಿಕ ಆಡಳಿತ ಮಾಡಿದವರು. ರೆಡ್ಡಿ ಅವರ ಕೆಲಸ ನಮಗೆ ಪ್ರೇರಣೆ ಎಂದರು.
ಕರ್ನಾಟಕದ ಭವ್ಯ ಭವಿಷ್ಯದ ನಿರ್ಧಾರಕ್ಕೆ ಅವರು ಹಾಕಿಕೊಟ್ಟ ಮಾರ್ಗ ನಮಗೆ ದಾರಿದೀಪ. ಹೊಸ ಪ್ರತಿಮೆ ಆಗಬೇಕು ಅಂತ ಇತ್ತು. ಅವರ ಜನ್ಮದಿನದಂದು ಪ್ರತಿಮೆ ನಿರ್ಮಾಣಕ್ಕೆ ಸೂಚನೆ ನೀಡಿದ್ದೆ. ಅವರಿಗೆ ಗೌರವ ಕೊಡೋದು ಅವಶ್ಯಕತೆ ಇದೆ. ವಿಧಾನಸೌಧದಲ್ಲಿ ಕೆಸಿ ರೆಡ್ಡಿ ಅವರ ಫೋಟೋ ಇಡಲು ಕ್ರಮ ಕೈಗೊಳುತ್ತೇವೆ. ಅವರ ಹುಟ್ಟೂರು ಅಭಿವೃದ್ಧಿಗೂ, ಸ್ಮಾರಕಕ್ಕೂ ಅಗತ್ಯ ಅನುದಾನ ಬಿಡುಗಡೆ ಮಾಡುತೇವೆ ಎಂದರು.
ಇದನ್ನೂ ಓದಿ: ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಚಾಮುಂಡೇಶ್ವರಿ ಮೇಲೆ ಸಿದ್ದರಾಮಯ್ಯ ಆಣೆ ಮಾಡಲಿ: ಈಶ್ವರಪ್ಪ ಸವಾಲು
ಮ್ಯೂಸಿಯಂ ಸ್ಥಾಪನೆಗೆ ಕ್ರಮ: ಕರ್ನಾಟಕದ ಹೋರಾಟ, ಸಿಎಂಗಳ ನಿರ್ಧಾರ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ ಮ್ಯೂಸಿಯಂ ಅವಶ್ಯಕತೆ ಇದೆ. ಕರ್ನಾಟಕದಲ್ಲಿ ಮ್ಯೂಸಿಯಂ ಸ್ಥಾಪನೆ ಬಗ್ಗೆ ಚರ್ಚೆ ಮಾಡಿ ಕ್ರಮ ತಗೊಳುತ್ತೇವೆ ಎಂದು ಇದೇ ವೇಳೆ ತಿಳಿಸಿದರು. ದೆಹಲಿಯಲ್ಲಿ ಮ್ಯೂಸಿಯಂ ಇದೆ. ಅದೇ ಮಾದರಿ ರಾಜ್ಯದಲ್ಲೂ ಮ್ಯೂಸಿಯಂ ನಿರ್ಮಿಸಲು ಚರ್ಚೆ ನಡೆಸುತ್ತೇವೆ. ಕರ್ನಾಟಕ ಕಟ್ಟಿದವರನ್ನ ಮುಂದಿನ ಪೀಳಿಗೆ ಮರೆಯಬಾರದು. ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕು. ಯುವ ಪೀಳಿಗೆಗೆ ಮಹನೀಯರ ಕುರಿತು ತಿಳಿಸಬೇಕು. ಎಲ್ಲ ಮುಖ್ಯಮಂತ್ರಿಗಳ ಸಾಹಿತ್ಯ ರಚನೆ ಮಾಡಬೇಕು. ಈ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದರು.