ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಎಲ್ಲರಿಗೂ ಒಂದೇ ಆಗಿದ್ದು, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಕಾರ್ ಡ್ರೈವರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಮರೆಯಬಾರದು. ಚುನಾವಣಾ ನೀತಿ ಸಂಹಿತೆ ಇದ್ದು, ಅದನ್ನು ಎಲ್ಲರೂ ಪಾಲನೆ ಮಾಡಬೇಕು. ಯಾರು ಪಾಲನೆ ಮಾಡುವುದಿಲ್ಲವೋ ಅವರ ವಿರುದ್ಧ ನೀತಿ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸುತ್ತಾರೆ. ಕಾಂಗ್ರೆಸ್ ಸೋಲಿನ ಭೀತಿಯಿಂದ ಈ ರೀತಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಅವರಿಗೆ ಉಪ ಚುನಾವಣೆ ರಿಸಲ್ಟ್ ಏನಿದೆ ಅಂತಾ ಗೊತ್ತಿದೆ. ಹಾಗಾಗಿ ಹತಾಶರಾಗಿ ಅವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಆರ್.ಆರ್ ನಗರದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಮ್ಮದು ಶಿಸ್ತಿನ ಪಕ್ಷ. ಕೆಲವು ವ್ಯತ್ಯಾಸ ಇದ್ದು, ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಪಕ್ಷದ ನಾಯಕರು ಎಲ್ಲವನ್ನೂ ಸರಿ ಮಾಡಲಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತರ ಮೇಲೆ ಮುನಿರತ್ನ ಕೇಸ್ ಹಾಕಿಸಿದ್ದ ವಿಚಾರ ಎಲ್ಲವೂ ನಮ್ಮ ಗಮನದಲ್ಲಿ ಇದೆ. ವರಿಷ್ಠರ ಗಮನದಲ್ಲೂ ಇದೆ. ಅದರ ಹಿನ್ನೆಲೆ ಏನು, ಬೇರೆ ಬೇರೆ ಪಕ್ಷದಲ್ಲಿ ಇದ್ದಾಗ ಏನಾಗಿತ್ತು, ಅದೆಲ್ಲವನ್ನೂ ಸರಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು. ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯುತ್ತಿರಾ ಎನ್ನುವ ಪ್ರಶ್ನೆಗೆ, ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ, ವಿವರಣೆ ನೀಡುವುದಿಲ್ಲ ಎಂದರು.