ಬೆಂಗಳೂರು: ಸಮಾಜ ಘಾತಕ ಚಟುವಟಿಕೆಗೆ ಸಂಚು ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಗಂಭೀರ ಆರೋಪದಡಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ರಾಜ್ಯ ಮಟ್ಟದ ಬ್ಯಾಂಕ್ ಖಾತೆಯನ್ನು ನಗರ ಪೂರ್ವ ವಿಭಾಗದ ಪೊಲೀಸರು ಈಗಾಗಲೇ ಜಪ್ತಿ ಮಾಡಿದ್ದಾರೆ. ಈ ಖಾತೆಗಳ ಪರಿಶೀಲನೆಯ ಸಂದರ್ಭದಲ್ಲಿ ಸಂಘಟನೆ ರಚನೆಯಾದಾಗಿನಿಂದ ಈವರೆಗೂ ಸುಮಾರು 10.5 ಕೋಟಿ ರೂ. ವ್ಯವಹಾರ ಆಗಿರುವುದನ್ನು ಕಂಡು ಹಿಡಿದಿದ್ದಾರೆ.
ವರ್ಗಾವಣೆಯಾದ ಕೋಟ್ಯಂತರ ರೂಪಾಯಿ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ಜಾರಿ ನಿರ್ದೇಶಾನಾಲಯದ ಮೊರೆ ಹೋಗಿದ್ದಾರೆ. ನಿಷೇಧಿತ ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳು ರಚನೆಯಾಗಿ 13 ವರ್ಷಗಳಿಂದ ದೇಶ-ವಿದೇಶದಿಂದ ದೇಣಿಗೆ ರೂಪದಲ್ಲಿ ಹಣ ಪಡೆದು ಪಿಎಫ್ಐ ಕಾನೂನು ಬಾಹಿರ ಕೃತ್ಯಗಳಿಗೆ ಬಳಸುತ್ತಿತ್ತು ಎಂಬ ಆಪಾದನೆ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ರಾಷ್ಟ್ರಿಯ ತನಿಖಾ ಸಂಸ್ಥೆ (ಎನ್ಐಎ) ಪಿಎಫ್ಐ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಮುಖಂಡರ ಮೇಲೆ ರಾತ್ರೋರಾತ್ರಿ ದೊಡ್ಡ ಮಟ್ಟದ ದಾಳಿ ನಡೆಸಿತ್ತು. ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ದಶಕಗಳಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಹಿಂಸಾಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ. ಈ ಮಧ್ಯೆ ಕಾರ್ಯಪ್ರವೃತ್ತರಾದ ನಗರ ಪೊಲೀಸರು ರಾಜ್ಯದಲ್ಲಿಯೂ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.
20 ಸಾವಿರಕ್ಕೂ ಹೆಚ್ಚು ಬಾರಿ ಹಣ ವರ್ಗಾವಣೆ: ಪಿಎಫ್ಐ ಹೆಸರಿನ ರಾಜ್ಯ ಮಟ್ಟದ ಖಾತೆಯನ್ನು ಜಪ್ತಿ ಮಾಡಿಕೊಂಡಿದ್ದ ಪೊಲೀಸರು ಪರಿಶೀಲನೆಯ ವೇಳೆ ಕಳೆದ 13 ವರ್ಷಗಳಲ್ಲಿ 20 ಸಾವಿರಕ್ಕೂ ಅಧಿಕ ಬಾರಿ ಹಣದ ವಹಿವಾಟು ನಡೆಸಿರುವುದನ್ನು ಕಂಡುಕೊಂಡಿದ್ದಾರೆ. ಈವರೆಗೂ ಸುಮಾರು 10.5 ಕೋಟಿ ರೂ.ಬ್ಯಾಂಕ್ ಖಾತೆಗಳಿಗೆ ಹಣ ಬಂದಿದೆ. ಈ ಹಣ ಅಕ್ರಮ ಅಥವಾ ಸಕ್ರಮವೇ ಎಂಬುದನ್ನು ಬಗೆಹರಿಸುವುದೇ ಈಗಿನ ಸವಾಲು.
ಪಿಎಫ್ಐ ಬ್ಯಾಂಕ್ ಖಾತೆಗೆ ದೇಣಿಗೆ ರೂಪದಲ್ಲಿ ಹರಿದುಬಂದಿದ್ದ ಕೋಟ್ಯಂತರ ಹಣವನ್ನು ವರ್ಗಾವಣೆ ಮಾಡಿದ್ದ ದೇಣಿಗೆದಾರರು ತಮ್ಮ ಗುರುತು ತಿಳಿಯದಿರಲು ಬಹುತೇಕ ಎಟಿಎಂಗಳ ಮೂಲಕವೇ ಅಕೌಂಟ್ಗಳಿಗೆ ಹಣ ಹಾಕಿದ್ದಾರೆ. ಶೇ.60 ರಷ್ಟು ಈ ಮಾರ್ಗದಲ್ಲಿಯೇ ಹಣ ಬಂದಿದೆ ಅನ್ನೋದು ಗಮನಾರ್ಹ. ದೇಶ-ವಿದೇಶ ಮಾತ್ರವಲ್ಲದೆ ಸ್ಥಳೀಯ ಧಾರ್ಮಿಕ ಕೇಂದ್ರಗಳಿಂದಲೂ ಹಣ ವರ್ಗಾವಣೆಯಾಗಿದೆ. ವಿವಿಧ ಬ್ಯಾಂಕ್ ಎಟಿಎಂ ಹಾಗೂ ಡಿಪಾಸಿಟ್ ಕೇಂದ್ರಗಳಿಂದ 50 ಸಾವಿರ ರೂ.ಗೂ ಕಡಿಮೆ ಹಣ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣದ ಮೂಲ ಪತ್ತೆ ಹಚ್ಚಲು ಇಡಿಗೆ ಪತ್ರ: ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ರಾಜ್ಯ ಮಟ್ಟದ ಮುಖಂಡರ ಪಿಎಫ್ಐ ಬ್ಯಾಂಕ್ ಖಾತೆಗಳಿಗೆ ಹರಿದುಬಂದಿದೆ. ಪರೋಕ್ಷವಾಗಿ ಹಿಂಸಾಚಾರ ಕೃತ್ಯಗಳಿಗೆ ಹಣ ವಿನಿಯೋಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು 10.5 ಕೋಟಿ ಹಣದ ಮೂಲದ ಬಗ್ಗೆ ತನಿಖೆಯಾಗಬೇಕಿದೆ. ಸಂಬಂಧಪಟ್ಟ ಬ್ಯಾಂಕ್ ಹಿರಿಯ ಅಧಿಕಾರಿಗಳಿಂದ ಪಿಎಫ್ಐ ಖಾತೆಗಳಿಗೆ ಹಣದ ವಹಿವಾಟು ನಡೆಸಿರುವ ಸಮಗ್ರ ದಾಖಲಾತಿ ಪಡೆದು ಕ್ರೋಢೀಕರಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಪತ್ರ ಬರೆದು ಹಣ ಮೂಲದ ಪತ್ತೆ ಹಚ್ಚುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ