ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸಂದರ್ಭದಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದ ಆರೋಪದಡಿ ಬಂಧಿತನಾಗಿರುವ ಅಪ್ರಾಪ್ತನೊಬ್ಬನ ವಯಸ್ಸನ್ನು ದೃಢೀಕರಿಸಿದ ದಾಖಲೆ ಸಲ್ಲಿಸುವಂತೆ ಹೈಕೋರ್ಟ್ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಸೂಚಿಸಿದೆ.
ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಕನ ತಾಯಿ ಸಲ್ಲಿಸಿರುವ ಹೇಬಿಯಸ್ ಕಾಪರ್ಸ್ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ನವೆಂಬರ್ 18ರೊಳಗೆ ಬಂಧಿತನ ವಯಸ್ಸನ್ನು ದೃಢೀಕರಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಎನ್ಐಎಗೆ ನಿರ್ದೇಶಿಸಿದೆ.
ಪ್ರಕರಣದಲ್ಲಿ ಆರೋಪಿತನಾಗಿದ್ದ ಬಾಲಕನನ್ನು ಪೊಲೀಸರು 2020ರ ಆಗಸ್ಟ್ 12ರಂದು ಬಂಧಿಸಿದ್ದರು. ಇದೀಗ ಆತನ ತಾಯಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ತನ್ನ 17 ವರ್ಷದ ಮಗನನ್ನು ಅಕ್ರಮವಾಗಿ ಬಂಧಿಸಲಾಗಿದೆ. ಪೊಲೀಸರ ಈ ಕ್ರಮ ಬಾಲನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯ್ದೆಗೆ ವಿರುದ್ಧವಾಗಿದೆ. ಹಾಗಿದ್ದೂ, ಕಾಯ್ದೆಯ ಸೆಕ್ಷನ್ 10 ಪ್ರಕಾರ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಅಪ್ರಾಪ್ತನನ್ನು ಬಂಧಿಸಿದರೆ ಆತನನ್ನು ವಿಶೇಷ ಬಾಲಪರಾಧಿ ಪೊಲೀಸ್ ಘಟಕದ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಇರಿಸಬೇಕು. ಬಂಧಿಸಿದ 24 ಗಂಟೆಯೊಳಗೆ ಬಾಲನ್ಯಾಯ ಮಂಡಳಿ ಎದುರು ಹಾಜರುಪಡಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೇ, ಪ್ರಕರಣದಲ್ಲಿ ಬಾಲಕನನ್ನು ಲಾಕಪ್ ಅಥವಾ ಜೈಲಿನಲ್ಲಿ ಇಡಬಾರದು. ಈ ಪ್ರಕರಣದಲ್ಲಿ ಬಂಧಿತನನ್ನು ಲಾಕಪ್ನಲ್ಲಿ ಇಟ್ಟು, ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಇದು ಅಕ್ರಮ ಬಂಧನವಾಗಿದ್ದು, ಕೂಡಲೇ ಆತನನ್ನು ಹೈಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.