ಬೆಂಗಳೂರು: ನಗರದಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಮರ ಬಿದ್ದು ಮೃತಪಟ್ಟ ಘಟನೆ ಬೇಗೂರಿನ ಯಜಮಾನ ಲೇಔಟ್ನಲ್ಲಿ ನಡೆದಿದೆ.
ಹೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ನಗರದ ಬೊಮ್ಮನ ಹಳ್ಳಿ ಸಮೀಪದ ಬೇಗೂರಿನಲ್ಲಿ ಭಾರಿ ಗಾಳಿ, ಮಳೆ ಸುರಿಯುತ್ತಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತರು, ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಇವರ ಮೇಲೆ ಮರ ಬಿದ್ದು ಈ ಅವಘಡ ಸಂಭವಿಸಿದೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ನೆರವಿಗೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟಿದ್ದಾರೆ ಎನ್ನಲಾಗಿದೆ.
ಕೂಡಲೇ ಸ್ಥಳಕ್ಕೆ ಬಿಬಿಎಂಪಿ ಸದಸ್ಯ ಅಂಜಿನಪ್ಪ ಹಾಗೂ ಅರಣ್ಯ, ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಘಟನೆಯಲ್ಲಿ ಮೃತ ಪಟ್ಟ ಮಹಿಳೆಯ ಕುಟುಂಬಕ್ಕೆ ಬಿಬಿಎಂಪಿ ಕಡೆಯಿಂದ ಪರಿಹಾರ ನೀಡಲಾಗುವುದು. ಸುರಿದ ಮಳೆಗೆ ನಗರ ವ್ಯಾಪ್ತಿಯಲ್ಲಿ ಹಲವು ಮನೆಗಳು ಜಖಂ ಆಗಿವೆ. ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಈ ಮೂಲಕ ಇಂದಿನ ಭಾರೀ ಮಳೆಗೆ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು ಬಲಿಯಾದಂತಾಗಿದೆ. ಬೆಂಗಳೂರಿನ ಲಕ್ಷ್ಮೀದೇವಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಕಲ್ಲು ಕೆಳಗೆ ಬಿದ್ದು 22 ವರ್ಷದ ಶಿಲ್ಪಾ ಎಂಬ ಯುವತಿ ಮೃತಪಟ್ಟಿದ್ದರು.