ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆ ನಾಳೆಯಿಂದ ಆರಂಭವಾಗಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ (ಜ್ಞಾನ ಭಾರತಿ )ಯುಜಿಯ 5ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.
ಬೆಂಗಳೂರು ವಿವಿ(ಜ್ಞಾನ ಭಾರತಿ)ಯಲ್ಲಿ ನಾಳೆಯಿಂದ 5ನೇ ಸೆಮಿಸ್ಟರ್ನ ಬಿಎ, ಬಿಎಸ್ಸಿ, ಬಿಕಾಂ ಪರೀಕ್ಷೆಗಳು ನಡೆಯಬೇಕಿತ್ತು. ಆದ್ರೆ ಬೆಂಗಳೂರಿನಲ್ಲಿ ನಾಳೆ ಸಾರಿಗೆ ಮುಷ್ಕರದಿಂದ ಬಸ್ ಸಂಚಾರದಲ್ಲಿ ವ್ಯತ್ಯಾಸವಾಗಬಹುದು ಎಂದು ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಪ್ರಕಟಣೆ ಹೊರಡಿಸಿದೆ.
ಮುಂದೂಡಿಕೆಯಾಗಿರುವ ಪರೀಕ್ಷೆಗಳ ದಿನಾಂಕ ಸದ್ಯದಲ್ಲೇ ಪ್ರಕಟಿಸುವುದಾಗಿ ಬೆಂಗಳೂರು ವಿವಿ ತಿಳಿಸಿದೆ. ಹಾಗೇ ಬೆಂಗಳೂರು ನಗರ ವಿಶ್ವವಿದ್ಯಾಲಯ ( ಸೆಂಟ್ರಲ್)ದಲ್ಲೂ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಕಡ್ಡಾಯವಲ್ಲ
ಇನ್ನು ಸಾರಿಗೆ ಮುಷ್ಕರ ಹಿನ್ನೆಲೆ 10ನೇ ತರಗತಿಗೆ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗುವುದು ಕಡ್ಡಾಯವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮುಷ್ಕರ ಹಿನ್ನೆಲೆ ಬಸ್ಗಳು ವ್ಯತ್ಯಯವಾಗುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಬಾರದೆಂದು ಭೌತಿಕ ತರಗತಿ ಹಾಜರಾಗಲು ಕಡ್ಡಾಯವಲ್ಲ. ಇದರ ಬದಲಾಗಿ ಅನ್ಲೈನ್ ಕ್ಲಾಸ್ ಮೂಲಕ ಪಾಠ ಕೇಳಬಹುದಾಗಿದೆ.