ಬೆಂಗಳೂರು : ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನಗರದಲ್ಲಿ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಜನರು ಮುಂದಾಗಿದ್ದಾರೆ. ವೈಭವದ ಹಬ್ಬದ ಆಚರಣೆಗೆ ಅನುವಾಗಲು ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆಗಳು ಸಜ್ಜಾಗಿವೆ. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಹಲವು ನಿರ್ಬಂಧಗಳೊಂದಿಗೆ ಗಣೇಶೋತ್ಸವ ನಡೆಯಿತು. ಹೀಗಾಗಿ ಆಚರಣೆಯಲ್ಲಿ ಅದ್ಧೂರಿತನ ಸಂಭ್ರಮ ಇರಲಿಲ್ಲ. ಆದರೆ ಈ ಬಾರಿ ವಿಘ್ನ ನಿವಾರಕನನ್ನು ಮನೆಯಲ್ಲಿ ಮಾತ್ರವಲ್ಲದೆ ಸಾರ್ವಜನಿಕವಾಗಿಯೂ ಅದ್ಧೂರಿಯಾಗಿ ಇಡಲು ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ನಗರದ ಮಾರುಕಟ್ಟೆಗಳಿಗೆ ಮಣ್ಣಿನ ತರಹೇವಾರಿ ಗಣೇಶ ಮತ್ತು ಗೌರಿ ಮೂರ್ತಿಗಳು ಆಗಮಿಸಿವೆ. ಹಲವು ಬಡಾವಣೆಗಳಲ್ಲಿ, ರಸ್ತೆ ಬದಿಗಳಲ್ಲಿ ಮೂರ್ತಿಗಳು ರಾಜಾಜಿಸುತ್ತಿದ್ದು, ಪರಿಸರಸ್ನೇಹಿ ಮೂರ್ತಿಗಳು ಹಾಗೂ ಆಕರ್ಷಕ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ.
![Bangalore Ready for Gauri Ganesha Festival](https://etvbharatimages.akamaized.net/etvbharat/prod-images/16213548_bngan.jpg)
ಹಬ್ಬಕ್ಕೆ ಹೂವಿನ ದರ ಏರಿಕೆ: ಮಾರುಕಟ್ಟೆಯಲ್ಲಿ ಮಲ್ಲಿಗೆ ಕೆ.ಜಿ.ಗೆ 400 ರೂ, ಕನಕಾಂಬರ ಕೆ.ಜಿ.ಗೆ 400 ರೂ, ಕಾಕಡ 200 ರೂ, ಸುಗಂಧರಾಜ 150 ರೂ, ಸೇವಂತಿಗೆ ಕೆ.ಜಿ.ಗೆ 150 ರೂ, ಗುಲಾಬಿ 80 ರಿಂದ 100 ರೂ, ಕಣಗಲ ಹೂ 70 ರೂ, ತುಳಸಿ 60 ರೂ. ಚೆಂಡು ಹೂವು 20 ರೂ ಗೆ ವ್ಯಾಪಾರವಾಗುತ್ತಿದೆ.
![Bangalore Ready for Gauri Ganesha Festival](https://etvbharatimages.akamaized.net/etvbharat/prod-images/16213548_bngg.jpg)
ಮಳೆಯಿಂದ ಕೊಳೆಯುತ್ತಿರುವ ಹೂವುಗಳು: ಕೆ.ಆರ್. ಮಾರುಕಟ್ಟೆಗೆ ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮಾಲೂರು, ಆನೇಕಲ್, ಮಾಗಡಿ ಸೇರಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಂದ ಹೂವು ಬರುತ್ತದೆ. ಆದರೆ ನಿರಂತರ ಮಳೆಯಿಂದ ಬೇಡಿಕೆಯಷ್ಟು ಹೂವು ಬಂದರೂ, ಹೆಚ್ಚು ಸಮಯ ಉಳಿಯದೆ ಕೊಳೆಯುತ್ತಿವೆ. ಹಾಗಾಗಿ ಹಬ್ಬದಲ್ಲಿ ಈ ಬಾರಿ ಲಾಭದ ಬಗ್ಗೆ ನಿರೀಕ್ಷೆ ಮಾಡುವುದು ಕಷ್ಟ. ಆದಾಗ್ಯೂ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ, ಹಬ್ಬದಂದು ಮಳೆಗೆ ವಿಶ್ರಾಂತಿ ದೊರೆತರೆ ವ್ಯಾಪಾರ ಆಗಬಹುದು.
![Bangalore Ready for Gauri Ganesha Festival](https://etvbharatimages.akamaized.net/etvbharat/prod-images/16213548_bng.jpg)
ಬಣ್ಣಬಣ್ಣದ ಬಳೆಗಳಿಗೆ ಬೇಡಿಕೆ: ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಬಳೆ ಕೊಡುವುದು ಶಾಸ್ತ್ರ. ಹೀಗಾಗಿ ಫ್ಯಾನ್ಸಿ ಸ್ಟೋರ್‌ಗಳಲ್ಲಿ ಬಣ್ಣ ಬಣ್ಣದ ಬಳೆಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ ಹೆಣ್ಣು ಮಕ್ಕಳ ಅಲಂಕಾರಿಕ ವಸ್ತುಗಳ ಖರೀದಿಯೂ ಬಿರುಸಾಗಿದೆ. ಇದರ ಜೊತೆಗೆ ಗಣೇಶ ಹಬ್ಬಕ್ಕೆ ವೇದಿಕೆ ಅಲಂಕರಿಸಲು ಅಗತ್ಯವಾದ ಬಣ್ಣದ ಕಾಗದ, ಬಲೂನು, ಪ್ಲಾಸ್ಟಿಕ್ ಹೂವುಗಳು, ಹಾರಗಳು, ತೋರಣಗಳು ಸೇರಿ ಅಲಂಕಾರಿಕ ವಸ್ತುಗಳ ಖರೀದಿಯೂ ಬಿರುಸಾಗಿದೆ.
ಗೌರಿ ಹಬ್ಬಕ್ಕೆ ಬಾಗಿನ ವಸ್ತುಗಳ ಮಾರಾಟ: ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಕೊಡುವುದು ವಾಡಿಕೆ. ಅದೇ ರೀತಿ ಗೌರಿ ಪೂಜೆಯಲ್ಲೂ ಬಾಗಿನ ಇರಿಸಿ ಪೂಜೆ ಮಾಡಲಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬಾಗಿನ ವಸ್ತುಗಳಾದ ಅರಿಶಿನ ಕುಂಕುಮ ಡಬ್ಬಿ, ಕನ್ನಡಿ, ಬಾಚಣಿಕೆ ಇತ್ಯಾದಿ ವಸ್ತುಗಳ ಮಾರಾಟ ಜೋರಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ.. ಆದ್ರೆ