ಯಲಹಂಕ (ಬೆಂಗಳೂರು): ಯಲಹಂಕದ ಯುವತಿ ಯುಕ್ತಿ ರಾಜೇಂದ್ರ(17) ಐಎಸ್ಎಸ್ಎಫ್ ಏಷ್ಯನ್ ಏರ್‌ಗನ್ ಚಾಂಪಿಯನ್ ಶಿಪ್ನ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡು ದೇಶಕ್ಕೆ ಕೀರ್ತಿ ತಂದಿದ್ದಾರೆ.
ದಕ್ಷಿಣ ಕೊರಿಯಾದ ಡೇಗು ನಗರದಲ್ಲಿ ಯುವತಿಯರ 15ನೇ ವರ್ಷದ ಏಷ್ಯನ್ ಏರ್‌ಗನ್ ಚಾಂಪಿಯನ್ ಶಿಪ್ ಪಂದ್ಯಾವಳಿ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್ಎಸ್ಎಫ್) ಅಡಿಯಲ್ಲಿ ನಡೆಯುತ್ತಿದೆ.
ಭಾರತಕ್ಕೆ ನಾಲ್ಕು ಚಿನ್ನದ ಪದಕ: ನ.9ರಿಂದ 19ರ ವರೆಗೂ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಟೀಮ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಸಿಕ್ಕಿದೆ. ಇನ್ನು, ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೂರು ಪದಕಗಳು ಭಾರತಕ್ಕೆ ಸಿಕ್ಕಿವೆ. ಯುಕ್ತಿ ರಾಜೇಂದ್ರ ಚಿನ್ನ ಗೆದ್ದರೆ, ಬಾನೋಟ್ ಗೌತಮಿ ಬೆಳ್ಳಿ ಮತ್ತು ಹಜೆಲ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮಗಳು ಚಿನ್ನದ ಪದಕ ಗೆದ್ದಿಕ್ಕಕ್ಕೆ ಯುಕ್ತಿ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಯಲಹಂಕದ ಮಾತೃ ಬಡಾವಣೆಯ ಯುಕ್ತಿ ರಾಜೇಂದ್ರ ಹೆಬ್ಬಾಳ ಕೆಂಪಾಪುರದ ಸಿಂದಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ಓದುತ್ತಿದ್ದಾರೆ. ಸಹಕಾರ ನಗರ ಎಮಿನೆಂಟ್ ಹಬ್ ಶೂಟಿಂಗ್ ಅಕಾಡೆಮಿಯಲ್ಲಿ ಇವರು ತರಬೇತಿ ಪಡೆದಿದ್ದರು. ಓದಿನಲ್ಲೂ ಮುಂದಿರುವ ಯುಕ್ತಿ ಭರತನಾಟ್ಯದಲ್ಲಿ ವಿದ್ವತ್ ಜ್ಯೂನಿಯರ್ ಪದವಿ ಪಡೆದಿದ್ದಾರೆ.
20ಕ್ಕೂ ಹೆಚ್ಚು ದೇಶದ ಯುವತಿಯರು ಭಾಗವಹಿಸಿದ್ದ ಏರ್‌ಗನ್ ಚಾಂಪಿಯನ್ ಶಿಪ್ನ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಯುಕ್ತಿ, ಗೌತಮಿ, ಹಜೆಲ್ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ನ.9ರಂದು ಪ್ರಾರಂಭವಾಗಿರುವ ಏರ್‌ಗನ್ ಚಾಂಪಿಯನ್ ಶಿಪ್ ನ. 18ರಂದು ಮುಗಿಯಲಿದೆ. ಚಿನ್ನದ ಪದಕಕ್ಕೆ ಕೊರಳೊಡ್ಡಿದ ಯುಕ್ತಿ ರಾಜೇಂದ್ರ ನಾಳೆ ಸ್ವದೇಶಕ್ಕೆ ಮರಳುತ್ತಿದ್ದಾರೆ. ಮಗಳನ್ನು ಬರಮಾಡಿಕೊಳ್ಳಲು ಪೋಷಕರು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಇಂಟರ್‌ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆ: ಟಾಪ್ 100ರಲ್ಲಿ ಉಡುಪಿಯ ವಿಘ್ನೇಶ್