ಬೆಂಗಳೂರು: ನಕಲಿ ನೋಟು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಅಪರಾಧಿ ನಾಸಿರ್ಗೆ ಭಾರತೀಯ ದಂಡ ಸಂಹಿತೆ ಕಲಂ 489 (ಬಿ) ಅಪರಾಧಕ್ಕೆ 4 ವರ್ಷ, 489(ಸಿ) ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲಾಗಿದೆ.
2013 ಆಗಸ್ಟ್ 21ರಂದು ಸಂಜೆ 5 ಗಂಟೆಗೆ ಎಸ್.ಜೆ.ಪಿ ರಸ್ತೆಯ ದಾಸಪ್ಪ ಆಸ್ಪತ್ರೆ ಮುಂಭಾಗದಲ್ಲಿ ಅಪರಾಧಿ ನಾಸಿರ್ ತನ್ನ ಸಹಚರನ ಜತೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ. ಈ ವೇಳೆ ಎಸ್.ಜೆ.ಪಾರ್ಕ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಅಪರಾಧಿಯು 2013ರಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ ಕರೆನ್ಸಿ ನೋಟುಗಳ ಮಾದರಿಯ ಖೋಟಾ ನೋಟುಗಳನ್ನು ಬಾಂಗ್ಲಾ ದೇಶದ ಮೂಲಕ ತರಿಸಿಕೊಂಡು ನೈಜ ನೋಟುಗಳೆಂದು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸಿರುವುದು ತನಿಖೆಯಲ್ಲಿ ಕಂಡು ಬಂದಿತ್ತು. ಹೀಗಾಗಿ ಆರೋಪಿಯನ್ನು ಅಪರಾಧ ಎಸಗಿರುವುದು ಖಚಿತವಾದ ಹಿನ್ನೆಲೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶಿಸಿದೆ.
ಸರ್ಕಾರಿ ಅಭಿಯೋಜಕರಾದ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.