ಬೆಂಗಳೂರು: ಕತೆಯೊಂದ ಹೇಳಿದೆ.. ಬರಿ ಗುರುತುಗಳೇ ಕಾಲೇಜಲಿ. ಕ್ಲಾಸ್ ರೂಮಿನ ಬೆಂಚಲಿ ಕಾರಿಡಾರ್ ವಾಲಲಿ ಸಾಲದೇ.. ಗುರುತೊಂದನು ನಾ ಗೀಚಿದೆ ಫ್ರೆಂಡ್ಶಿಪ್ನ ನೆಪದಲಿ.. ಎಂಬ ಹಾಡಿನ ಗುಂಗಿನೊಂದಿಗೆ ಕಾಲೇಜು ವಿದ್ಯಾರ್ಥಿಗಳು ನಾಳೆಯಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಕೋವಿಡ್ ಮಹಾಮಾರಿಯಿಂದಾಗಿ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಮೊರೆ ಹೋಗಬೇಕಾಯ್ತು. ತಮ್ಮ ಅರ್ಧ ಸಮಯವನ್ನು ಕಾಲೇಜಿನಲ್ಲಿಯೇ ಕಳೆಯುತ್ತಿದ್ದ ವಿದ್ಯಾರ್ಥಿಗಳು, ಈ ಕಡೆ ಸುಳಿಯದೆ ವರ್ಷಗಳೇ ಕಳೆದಿವೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಪಾಸಿಟಿವಿಟಿ ದರ 1.21% ರಷ್ಟಿದೆ. ಹೀಗಾಗಿ ರಾಜ್ಯ ಸರ್ಕಾರದ ಆದೇಶದಂತೆ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಾಳೆಯಿಂದ ಭೌತಿಕ ತರಗತಿಗಳನ್ನು ಪುನಾರಂಭಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ವಿವಿಯ ಎಲ್ಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲಾಗುತ್ತಿದೆ. ನಿನ್ನೆಯಿಂದಲೇ ಸ್ಯಾನಿಟೈಸ್ ಕೆಲಸವನ್ನ ಶುರು ಮಾಡಿರುವ ಆಡಳಿತ ಮಂಡಳಿ, ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುತ್ತಿದೆ.
ಬಹು ಸಮಯದ ನಂತರ ಕ್ಯಾಂಪಸ್ಗೆ ವಾಪಸ್ ಆಗುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಅದ್ದೂರಿಯಾಗಿ ಸ್ವಾಗತಿಸಲು ಈಗಾಗಲೇ ತಯಾರಿ ನಡೆಸಲಾಗಿದೆ. ಕೋವಿಡ್ ಲಾಕ್ಡೌನ್ನಿಂದಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ದೂರ ಉಳಿದಿದ್ದರು. ಹೀಗಾಗಿ, ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹಿಸಲು, ಕೊರೊನಾ ಭಯವನ್ನ ಹೋಗಲಾಡಿಸಿ ಹುರಿದುಂಬಿಸಲು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಒಟ್ಟಾರೆ, ವಿದ್ಯಾರ್ಥಿಗಳಿಲ್ಲದೆ ಬಣಗುಡುತ್ತಿದ್ದ ಕ್ಯಾಂಪಸ್ನಲ್ಲಿ ಇನ್ಮುಂದೆ ಆಟ-ಪಾಠ, ಹರಟೆ ಎಲ್ಲವೂ ಇರಲಿದೆ.