ಬೆಂಗಳೂರು: ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಸ್ಥಾನ ಸಿಕ್ಕ ಬೆನ್ನಲ್ಲೇ ಪಕ್ಷದ ಕಚೇರಿಗೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ನಂತರ ಕೇಶವಕೃಪಾಗೆ ತೆರಳಿ ಸಂಘ ಪರಿವಾರದ ಹಿರಿಯರ ಜೊತೆ ಮಾತುಕತೆ ನಡೆಸಿದರು.
ಅಧಿಕೃತ ನಿವಾಸ ಕಾವೇರಿಯಿಂದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದರು. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಟ್ಟಿಗೆ ಒಂದೇ ಕಾರಿನಲ್ಲಿ ಆಗಮಿಸಿದರು. ಬಿಜೆಪಿ ಕಚೇರಿಯಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಾಯಕರು ನಂತರ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು.
ಬಳಿಕ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಕಟೀಲ್ ಸೇರಿಕೊಂಡು ದೇಶ ವಿಭಜನೆಯ ಕರಾಳ ನೆನಪು ಕುರಿತ ಚಿತ್ರಪ್ರದರ್ಶನ ವೀಕ್ಷಿಸಿದರು. ನಂತರ ಮೂವರೂ ನಾಯಕರು ಒಂದೇ ಕಾರಿನಲ್ಲಿ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವಕೃಪಾಗೆ ತೆರಳಿದರು. ಸಂಘ ಪರಿವಾರದ ಹಿರಿಯರ ಜೊತೆ ಮಾತುಕತೆ ನಡೆಸಿದರು.
ಓದಿ: ಸಂಸದೀಯ ಮಂಡಳಿಯಲ್ಲಿ ಬಿಎಸ್ವೈಗೆ ಸ್ಥಾನ: ಪಕ್ಷ, ಸರ್ಕಾರದ ಹುಮ್ಮಸ್ಸು ಇಮ್ಮಡಿ ಎಂದ ಬೊಮ್ಮಾಯಿ