ಬೆಂಗಳೂರು: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ ಅಡಿ ಮೊದಲ ಹೃದಯ ಕಸಿಯನ್ನು ಇಂದು (ಡಿ.17) ಮಾಡಲಾಯಿತು. ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ ಮಾಡಲಾಗಿದ್ದು, ಇದಕ್ಕಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಿವಕುಮಾರ್ ಎಂಬುವವರಿಗೆ ಮೈಸೂರಿನ 27 ವರ್ಷದ ಯುವಕನ ಹೃದಯ ಕಸಿಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಾಡಲಾಯಿತು. ಡಾ.ನಾಗಮಲ್ಲೇಶ್, ರವಿಶಂಕರ್ ವೈದ್ಯರ ತಂಡದಿಂದ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ.
ಮೈಸೂರಿನ ಅಪೋಲೋ ಆಸ್ಪತ್ರೆಯಿಂದ 27 ವರ್ಷದ ಯುವಕನ ಜೀವಂತ ಹೃದಯ ತರಲಾಗಿದೆ. ಶಿವಕುಮಾರ್ ಎಂಬುವರಿಗೆ ಹೃದಯಾಘಾತವಾಗಿದ್ದರಿಂದ ಅವರಿಗೆ ಹೃದಯ ಕಸಿ ಮಾಡಬೇಕಾಗಿತ್ತು ಎಂದು ವೈದ್ಯ ಡಾ.ನಾಗಮಲ್ಲೇಶ್ ಹೇಳಿದರು.
ಅಪಘಾತದಲ್ಲಿ 27 ವರ್ಷದ ಯುವಕನಿಗೆ ಮಿದುಳು ನಿಷ್ಕ್ರಿಯಗೊಂಡಿತ್ತು. ಆ ಯುವಕನ ಹೃದಯವನ್ನು ಇಂದು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ತರಿಸಿದ್ದೇವೆ. ಸುಮಾರು 2 ಗಂಟೆ ಕಾಲ ಹೃದಯ ರವಾನೆ ಮಾಡಲಾಗಿದೆ. ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದ್ದು, ಬಳಿಕ ಶೇ.90 ರಷ್ಟು ಅವರ ಸಮಸ್ಯೆ ಬಗೆಹರಿಯಲಿದೆ ಎಂದರು.