ಬೆಂಗಳೂರು: ಬೂದು ಕುಂಬಳಕಾಯಿ, ಬಾಳೆಕಂಬ, ಹೂವು, ಹಣ್ಣು, ತರಕಾರಿಗಳನ್ನು ಆಯುಧ ಪೂಜೆಗೆ ಜನರು ಮುಗಿಬಿದ್ದು ಖರೀದಿಸುತ್ತಿದ್ದ ದೃಶ್ಯ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಕಂಡುಬಂತು. ಕೆ.ಆರ್.ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಬನಶಂಕರಿ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನಸಾಗರವೇ ನೆರೆದಿತ್ತು. ಹೂವು, ಹಣ್ಣುಮತ್ತು ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಸೇವಂತಿಗೆ ಕೆಜಿಗೆ 150 ರೂ, ಉತ್ತಮ ಗುಲಾಬಿಗೆ 350 ರೂ, ಚೆಂಡು ಹೂ 60 ರಿಂದ 70 ರೂ, ಕನಕಾಂಬರ 1,200 ರೂ, ಮಲ್ಲಿಗೆ ಹೂವು 2,000 ರೂ.ಗೆ. ಸುಗಂಧರಾಜ 300 ರೂ, ಸಂಪಿಗೆ 250 ರೂಗೆ ಮಾರಾಟವಾಗುತ್ತಿದೆ.
ಮೂಸಂಬಿ ಹಣ್ಣು ಸುಮಾರು 60 ರೂ, ದಾಳಿಂಬೆ ಹಣ್ಣು 60 ರಿಂದ 80 ರೂ, ಬಾಳೆಹಣ್ಣು ಕೆಜಿಗೆ 70 ರೂ, ಸೇಬು 100 ರೂ, ಸಪೋಟ 70 ರಿಂದ 80 ರೂ, ಸೀತಾಫಲ ಸುಮಾರು 170 ರೂ, ದ್ರಾಕ್ಷಿ ಹಣ್ಣು 250 ರೂ. ಗೆ ವ್ಯಾಪಾರವಾಗುತ್ತಿದೆ.
ತರಕಾರಿಗಳ ದರಗಳ ಪೈಕಿ ಟೊಮೆಟೊ ಮಾತ್ರ ಕಡಿಮೆ ಬೆಲೆ 15 ರೂ. ಗೆ ಮಾರಾಟವಾಗುತ್ತಿದೆ. ಉಳಿದಂತೆ ಬದನೆ 50 ರೂ, ಕ್ಯಾರೆಟ್ 50 ರೂ, ಬೀನ್ಸ್ 100 ರೂ, ಬೀಟ್‌ರೂಟ್ 50 ರೂ, ಉತ್ತಮ ಗುಣಮಟ್ಟದ ಆಲೂಗಡ್ಡೆ 30 ರೂ. ಬೆಲೆ ಇದೆ.
ಮಾವಿನ ಸೊಪ್ಪಿನ ಕಟ್ಟಿಗೆ 30 ರೂ ಗೆ, ಒಂದು ಮಾರು ತುಳಸಿಗೆ 60 ರೂ, ತೆಂಗಿನ ಕಾಯಿಗೆ 30 ರೂ, ಒಂದು ಕಟ್ಟು ವೀಳ್ಯದೆಲೆಗೆ 60 ರಿಂದ 80 ರೂ, ಒಂದು ನಿಂಬೆ ಹಣ್ಣು 4 ರೂ, ಜೋಡಿ ಬಾಳೆ ಕಂಬಗಳಿಗೆ 100 ರೂ, ಬೂದುಕುಂಬಳ ಕಾಯಿ ಒಂದು ಕೆ.ಜಿಗೆ 30 ರೂ. ನಂತೆ ಖರೀದಿಯಾಗುತ್ತಿತ್ತು.
ಕೋಲಾರ, ಆನೇಕಲ್, ಹೊಸಕೋಟೆ, ಮಾಲೂರು, ಮಾಗಡಿ, ರಾಮನಗರ, ಹೊಸೂರು ಸೇರಿದಂತೆ ಬೆಂಗಳೂರು ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಿಗೆ ಹೂವು, ಹಣ್ಣು, ತರಕಾರಿ ಸಾಕಷ್ಟು ಮಟ್ಟದಲ್ಲಿ ಪೂರೈಕೆಯಾಗುತ್ತಿದೆ ಎಂದು ವರ್ತಕರು ತಿಳಿಸಿದ್ದಾರೆ.
ತರಕಾರಿ ದರ (ಕೆ.ಜಿ.ಗಳಲ್ಲಿ):
ಬಟಾಣಿ | 170 ರೂ. |
ಕ್ಯಾಪ್ಸಿಕಮ್ | 70 ರೂ. |
ಈರುಳ್ಳಿ | 50 ರೂ. |
ಸೌತೆಕಾಯಿ | 40 ರೂ. |
ಮೆಣಸಿನಕಾಯಿ | 90 ರೂ. |
ಮೂಲಂಗಿ | 70 ರೂ. |
ಬೆಳ್ಳುಳ್ಳಿ | 180 ರೂ. |
ಶುಂಠಿ | 220 ರೂ. |
ಬೆಂಗಳೂರಲ್ಲಿ ನಾಡಹಬ್ಬದ ಸಡಗರ: ನಗರದಾದ್ಯಂತ ಸಂಭ್ರಮದಿಂದ ನಾಡಹಬ್ಬ ಆಚರಿಸಲಾಗುತ್ತಿದೆ. ವಿವಿಧೆಡೆ ಶಕ್ತಿದೇವತೆಯ ಆರಾಧನೆ ನಡೆಯುತ್ತಿದೆ. ಬಿಹಾರ ಮೂಲದ ಸಾಂಸ್ಕೃತಿಕ ಪರಿಷತ್ತಿನ ಸದಸ್ಯರಿಂದ ದುರ್ಗಾ ಮಾತೆಯ ವಿಶೇಷ ಆರಾಧನೆ ಗಮನ ಸೆಳೆಯಿತು. ನಾಲ್ಕು ದಶಕಗಳಿಂದಲೂ ಬೆಂಗಳೂರಿನಲ್ಲಿ ವಾಸಿಸುವ ಬಿಹಾರ ಜನರ ನಂಬಿಕೆ ಮತ್ತು ಸಂಸ್ಕೃತಿ ಹೊರಹೊಮ್ಮಿತು. ಆರ್‌ಟಿ ನಗರದಲ್ಲಿ ಭಾನುವಾರ ನಡೆದ ಮಹಾಪೂಜೆಯು ಸಮುದಾಯಗಳನ್ನು ಬೆಸೆಯುವ ಬಲವಾದ ಸಾಂಸ್ಕೃತಿಕ ಸಂಬಂಧಗಳಿಗೆ ವೇದಿಕೆಯಾಯಿತು.
ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ 49 ಸ್ತಬ್ಧ ಚಿತ್ರಗಳ ಮೆರುಗು, ಭರದ ಸಿದ್ಧತೆ- ವಿಡಿಯೋ