ಆನೇಕಲ್ (ಬೆಂಗಳೂರು): ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಈವರೆಗೆ 14 ಜನ ಮೃತಪಟ್ಟಿರುವುದು ದೃಢಪಟ್ಟಿದ್ದು, ಮೃತದೇಹಗಳು ಪತ್ತೆಯಾಗಿದೆ. ಮೂಲತಃ ಎಲ್ಲರೂ ತಮಿಳುನಾಡಿನವರಾಗಿದ್ದು, ಮೃತರಲ್ಲಿ ಒಂದೇ ಗ್ರಾಮದ ಎಂಟು ಕಾರ್ಮಿಕರು ಸೇರಿದ್ದಾರೆ. ಇವರೆಲ್ಲ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದು, ದೀಪಾವಳಿ ಸಮಯದಲ್ಲಿ ಕೂಲಿ ಕೆಲಸಕ್ಕೆಂದು ಪಟಾಕಿ ಅಂಗಡಿಗೆ ಬಂದಿದ್ದರು.
ಮೃತರ ವಿವರ: ಅತ್ತಿಬೆಲೆ ಪಟಾಕಿ ಗೋದಾಮಿಗೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದಿಂದ 10 ಜನ ಕಾರ್ಮಿಕರು ಕೆಲಸಕ್ಕಾಗಿ ಬಂದಿದ್ದರು. ಇವರಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಆದಿಕೇಶವನ್ (17), ಗಿರಿ (17), ವೇಡಪ್ಪನ್ (22), ಆಕಾಶ್ (17), ವಿಜಯರಾಘವನ್ (19), ವೆಳಂಬರದಿ (20), ಪ್ರಕಾಶ್ (20), ಸಚಿನ್ (22) ಎಂದು ಗುರುತಿಸಲಾಗಿದೆ. ಮೃತರು ತಮಿಳುನಾಡಿನ ಕೃಷ್ಣಗಿರಿ ಜಿಲ್ಲಾಧಿಕಾರಿ ಸರಯೂ ಅವರ ಸಂಬಂಧಿಕರ ಗೆಳೆಯರಾಗಿದ್ದರು.
ಇವರಲ್ಲದೇ, ಕಲ್ಲಕುರುಚ್ಚಿ ಜಿಲ್ಲೆಯ ಪ್ರಭಾಕರನ್ (17), ವಸಂತರಾಜ್ (23), ಅಪ್ಪಾಸ್ (23), ಸಂತೋಷ್ ಮೃತಪಟ್ಟವರು. ಮತ್ತೊಬ್ಬರ ಮೃತದೇಹ ಪತ್ತೆಯಾಗಿದ್ದು, ಗುರುತು ಸಿಕ್ಕಿಲ್ಲ.
7 ಮಂದಿಗೆ ಗಾಯ: ಘಟನೆಯಲ್ಲಿ ಒಟ್ಟು 7 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನವೀನ್, ರಾಜೇಶ್, ವೆಂಕಟೇಶ್ ಎಂಬವರನ್ನು ಬೆಂಗಳೂರಿನ ಮಡವಾಲದ ಸೈಂಟ್ ಜಾನ್ಸನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ್, ಚಂದ್ರು, ರಾಜೇಶ್ ಮತ್ತು ಫೌಲ್ ಕಬೀರ್ ಎಂಬವರಿಗೆ ಅತ್ತಿಬೆಲೆಯ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ರಾಜೇಶ್ ಮತ್ತು ವೆಂಕಟೇಶ್ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ಕೆಲವೇ ಗಂಟೆಗಳಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ಕರ್ನಾಟಕ, ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ
"ದೀಪಾವಳಿ ಹಬ್ಬದ ಸಲುವಾಗಿ ಯುವಕರು ಪಟಾಕಿ ಅಂಗಡಿಗೆ ಕೆಲಸಕ್ಕೆ ಬಂದಿದ್ದಾರೆ. ಇವರೆಲ್ಲರೂ ಒಟ್ಟು ನಾಲ್ಕು ಗ್ರಾಮಕ್ಕೆ ಸೇರಿದವರಾಗಿದ್ದಾರೆ. 13 ಜನ ಮೃತರ ಗುರುತು ಪತ್ತೆಯಾಗಿದೆ. ತಮಿಳುನಾಡು ಸರ್ಕಾರ ಮೃತರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಹೆಚ್ಚಿನ ಪರಿಹಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಕೆಲವೇ ಗಂಟೆಗಳಲ್ಲಿ ಪೋಸ್ಟ್ ಮಾರ್ಟಮ್ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡುತ್ತೇವೆ" ಎಂದು ತಮಿಳುನಾಡು ಸಚಿವ ಮಾ.ಸುಬ್ರಹ್ಮಣ್ಯ ತಿಳಿಸಿದರು.
ಪ್ರತ್ಯಕ್ಷದರ್ಶಿ ಹೇಳಿದ್ದೇನು?: "ಘಟನೆಯಲ್ಲಿ ಮೂವರು ನನ್ನ ಸ್ನೇಹಿತರು ಮೃತಪಟ್ಟಿದ್ದಾರೆ. ನಾವು ಹೊರಗಡೆ ಲಾರಿಯಿಂದ ಪಟಾಕಿಗಳನ್ನು ಅನ್ಲೋಡ್ ಮಾಡುತ್ತಿದ್ದೆವು. ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಗೋದಾಮಿನ ಒಳಗಡೆ ಇದ್ದ ಸ್ನೇಹಿತರು ಪಟಾಕಿ ಪ್ಯಾಕ್ ಮಾಡುತ್ತಿದ್ದರು. ಅವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಸುಟ್ಟು ಹೋಗಿದ್ದಾರೆ. ನಾವು ಹೊರಗಡೆ ಇದ್ದೆವು. ಹಾಗಾಗಿ ಅನಾಹುತದಿಂದ ಪಾರಾದೆವು" ಎಂದು ಪ್ರತ್ಯಕ್ಷದರ್ಶಿ ಕಾರ್ಮಿಕ ತಣಿ ಅಮುದನ್ ಮಾಹಿತಿ ನೀಡಿದ್ದಾರೆ.
ಬೆಂಕಿಗಾಹುತಿಯಾದ ಗೋದಾಮಿನಲ್ಲಿ 8 ಕೋಟಿ ರೂಪಾಯಿಗಳ ಪಟಾಕಿಯಿತ್ತು. ರಾಮಸ್ವಾಮಿರೆಡ್ಡಿ ಎಂಬವರು ಪರ್ಮನೆಂಟ್ ಲೈಸೆನ್ಸ್ ಹೊಂದಿದ್ದರು. ಅವರ ಮಗ ನವೀನ್ ಪಟಾಕಿ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ ಇಲ್ಲಿಂದಲೇ ಹೋಲ್ಸೇಲ್ನಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿತ್ತು. ನವೀನ್ ಅವರು ದೀಪಾವಳಿಗೆ 3-4 ತಿಂಗಳು ಮುಂಚಿತವಾಗಿಯೇ 4 ರಿಂದ 5 ಕೋಟಿ ರೂಪಾಯಿ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು.
ಆಸ್ಪತ್ರೆಗೆ ಎಂಪಿ ಭೇಟಿ: ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದ ಎಂಪಿ ಛಲಕುಮಾರ್ ಅವರು ಆಕ್ಸ್ಫರ್ಡ್ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಡಿಜಿಪಿ ಅಲೋಕ್ ಮೋಹನ್ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ದುರಂತ.. ಅವಘಡಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ: ಡಿಜಿ ಕಮಲ್ ಪಂತ್