ಬೆಂಗಳೂರು: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸರ್ವ ರೀತಿಯಲ್ಲೂ ಪ್ರಯತ್ನ ನಡೆಸಿರುವ ಕಾಂಗ್ರೆಸ್ ನಾಯಕರು ಇದೀಗ ಅತೃಪ್ತ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಒತ್ತಡ ಹೇರಲು ಮುಂದಾಗಿದ್ದಾರೆ.
ಮುಂಬೈನಲ್ಲಿರುವ ಅತೃಪ್ತರನ್ನ ಅನರ್ಹಗೊಳಿಸುವಂತೆ ಸ್ಪೀಕರ್ಗೆ ದೂರು ನೀಡಲು ಕೈ ನಾಯಕರು ಮುಂದಾಗಿದ್ದು, ಈ ಸಂಬಂಧ ಡಿಸಿಎಂ ನಿವಾಸದಲ್ಲಿ ಸುದೀರ್ಘ ಚರ್ಚೆಯನ್ನು ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಸೇರಿದಂತೆ ವಿವಿಧ ನಾಯಕರು ಈ ಸಂಬಂಧ ಚರ್ಚಿಸಿದ್ದು ಅಂತಿಮವಾಗಿ ಅವಕಾಶ ಸಿಕ್ಕರೆ ಶಾಸಕರ ಅನರ್ಹತೆಗೆ ಸ್ಪೀಕರ್ಗೆ ಮನವಿ ಮಾಡಲು ತೀರ್ಮಾನಿಸಿದ್ದಾರೆ.
ರಾಜೀನಾಮೆ ಕೊಟ್ಟಿರುವವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನ ಉಲ್ಲಂಘಿಸಿದ್ದಾರೆ. ಈ ಹಿಂದೆಯೇ ಅವರ ಮೇಲೆ ನಾವು ದೂರು ನೀಡಿದ್ದೆವು. ಪ್ರಸ್ತುತ ಅದೇ ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದಾರೆ. ಹೀಗಾಗಿ ಹಳೆಯ ದೂರನ್ನ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಾಯಕರು ಸ್ಪೀಕರ್ಗೆ ಮನವಿ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಎಲ್ಲಾ ಶಾಸಕರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ.
ರಾಜೀನಾಮೆ ಕೊಟ್ಟ ಶಾಸಕರ ಮೇಲೆ ದೂರು ನೀಡಲು ಕಾರಣ
ಪಕ್ಷಕ್ಕೆ ರಾಜೀನಾಮೆ ನೀಡಿರುವ ಎಲ್ಲಾ 13 ಶಾಸಕರು ಪಕ್ಷದ ನಿಯಮವನ್ನು ಮೀರಿದ್ದಾರೆ. ಅಲ್ಲದೆ ಬಿಜೆಪಿ ಸಹಕಾರವನ್ನು ಪಡೆದಿದ್ದಾರೆ. ಇದಕ್ಕೆ ನಮ್ಮ ಬಳಿ ಬಲವಾದ ಆಧಾರ ಇದೆ. ಬಿಜೆಪಿ ನಾಯಕರು ನಮ್ಮ ಶಾಸಕರನ್ನು ರಾಜಭವನಕ್ಕೆ ಕರೆದೊಯ್ದಿದ್ದರು. ಅಲ್ಲದೆ ಮುಂಬೈಗೆ ತೆರಳಿದ ಶಾಸಕರಿಗೆ ಅಲ್ಲಿನ ವಾಸ್ತವ್ಯ ಹಾಗೂ ಇಲ್ಲಿಂದ ವಿಮಾನದಲ್ಲಿ ತೆರಳುವ ವ್ಯವಸ್ಥೆಯನ್ನು ಕೂಡ ಅವರೇ ಮಾಡಿದ್ದಾರೆ.
ನಮ್ಮ ಪಕ್ಷದ ಶಾಸಕರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಎಲ್ಲಾ ಹಿನ್ನೆಲೆಗಳ ನಡುವೆ ನಮ್ಮ ಪಕ್ಷದ ಶಾಸಕರು ಸಂಪೂರ್ಣ ಬಿಜೆಪಿಯ ಹಿಡಿತದಲ್ಲಿದ್ದು, ಇದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರಲಿದೆ. ಈ ವಿವರವನ್ನ ಆಧಾರವಾಗಿಟ್ಟುಕೊಂಡು ರಾಜೀನಾಮೆ ನೀಡಿರುವ 13 ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುವ ಸಾಧ್ಯತೆ ಇದೆ. ಇದಕ್ಕೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಪಕ್ಷ ಕೂಡ ಬೆಂಬಲ ಘೋಷಿಸಲಿದೆ ಎಂದು ತಿಳಿದುಬಂದಿದೆ.