ಬೆಂಗಳೂರು: ಕೆನರಾ ಬ್ಯಾಂಕ್ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿ ಗ್ರಾಹಕರ ಡಾಟಾ ಕದಿಯಲು ಯತ್ನಿಸಿದ್ದ ಇಬ್ಬರು ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಸರಗೋಡಿನ ಹಫೀಜ್ ಹಾಗೂ ಸುಹೇಲ್ ಬಂಧಿತ ಆರೋಪಿಗಳು. ಯಶವಂತಪುರದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿ ಗ್ರಾಹಕರ ಡಾಟಾ ಕದಿಯಲು ಯತ್ನಿಸುತ್ತಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಕಳೆದ ಜುಲೈ12 ರಂದು ಕೆನರಾ ಬ್ಯಾಂಕ್‌ನ ತನಿಖಾಧಿಕಾರಿಗಳು ಆರೋಪಿಗಳಿಗಾಗಿ ಕಾಯುತ್ತ ಕುಳಿತಿದ್ದರು.
ಸಂಜೆ ಆಗುತ್ತಿದ್ದಂತೆ ಎಟಿಎಂಗೆ ಆರೋಪಿ ಹಫೀಜ್ ಸ್ಕಿಮ್ಮರ್ ಯಂತ್ರವನ್ನು ತೆಗೆದುಕೊಂಡು ಹೋಗಲು ಬಂದಿದ್ದ. ಆಗ ಸ್ಕಿಮ್ಮರ್ ಯಂತ್ರ ಬಿಚ್ಚುತ್ತಿದ್ದಾಗ ಬ್ಯಾಂಕ್ ಅಧಿಕಾರಿ ಪೂರ್ಣಚಂದ್ರನ್ ನೇರವಾಗಿ ಹಿಡಿದಿದ್ದಾರೆ. ಕೃತ್ಯದಲ್ಲಿ ತನ್ನ ಸ್ನೇಹಿತ ಸುಹೇಲ್ ಎಂಬಾತನೂ ಭಾಗಿಯಾಗಿದ್ದು, ಆತನೂ ಬರುವುದಾಗಿ ಖದೀಮ ತಿಳಿಸಿದ್ದಾನೆ. ಆದರೆ ಸುಮಾರು ಹೊತ್ತುಕಾದರೂ ಆತ ಬಾರದಿದ್ದಾಗ ಎಂಟಿಎಂಗೆ ಅಳವಡಿಸಿದ್ದ ಸ್ಕಿಮ್ಮರ್, ಪಿನ್‌ಹೋಲ್ ಕ್ಯಾಮೆರಾ ಸಮೇತ ಆರೋಪಿಯನ್ನು ಯಶವಂತಪುರ ಠಾಣೆಗೆ ಒಪ್ಪಿಸಿದ ಬ್ಯಾಂಕ್ ಅಧಿಕಾರಿ ಇಬ್ಬರ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಸ್ಕಿಮ್ಮರ್ ಡಿವೈಸ್:
ಎಟಿಎಂನ ಕಾರ್ಡ್ ಸ್ವೈಪ್ ಮಾಡುವ ಜಾಗದಲ್ಲಿ ಸುಲಭವಾಗಿ ಅಳವಡಿಸಬಹುದಾದ ಡಿವೈಸ್ ಇದಾಗಿದ್ದು, ಇದು ರೀಡರ್ ಹಾಗೂ ಕ್ಯಾಮೆರಾ ಎಂಬ ಎರಡು ಭಾಗಗಳನ್ನು ಒಳಗೊಂಡಿರಲಿದೆ. ಒಂದು ಭಾಗ ಸ್ವೈಪ್ ಮಾಡುವ ಕಾರ್ಡಿನ ಮಾಹಿತಿ ಯನ್ನು ರೀಡ್ ಮಾಡಿ ಸಂಗ್ರಹ ಮಾಡಿಕೊಳ್ಳುತ್ತದೆ. ಮತ್ತೊಂದು ಭಾಗ ಕ್ಯಾಮೆರಾ ಸಹಾಯದಿಂದ ನಮೂದಿಸುವ ಪಾಸ್‌ವರ್ಡ್ ಸೆರೆ ಹಿಡಿಯುತ್ತದೆ. ಈ ಮಾಹಿತಿಗಳನ್ನು ಪಡೆದು ನಕಲಿ ಕಾರ್ಡ್ ತಯಾರಿಸಿ ಗ್ರಾಹಕರ ಹಣ ಕದಿಯುವ ದಂಧೆ ಇದಾಗಿದೆ