ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನದ ಇಂದಿನಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಉಭಯ ಸದನಗಳಲ್ಲಿ ಆದ್ಯತೆ ಮೇರೆ ಪಕ್ಷ ಶಾಸಕರು ಪ್ರಸ್ತಾಪಿಸಬೇಕಾಗಿರುವ ವಿಚಾರಗಳು, ಸದನದ ಒಳ ಹೊರಗೆ ಪಕ್ಷದ ಹೋರಾಟ, ಮುಂಬರುವ ಚುನಾವಣೆಗಳ ಸಿದ್ಧತೆ, ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂಗಾರು ಮಳೆ ಆರ್ಭಟದಿಂದ ರಾಜ್ಯದಲ್ಲಿ ಉಂಟಾಗಿರುವ ಅನಾಹುತ, ಜನರು ಎದುರಿಸುತ್ತಿರುವ ಸಂಕಷ್ಟ, ಬೆಳೆ ಹಾನಿ, ರಸ್ತೆ, ಸೇತುವೆ ಹಾಳಾಗಿರುವುದು, ಮನೆ ಹಾಗೂ ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ ಮೊದಲಾದ ವಿಚಾರಗಳನ್ನು ಆದ್ಯತೆ ಮೇಲೆ ಪ್ರಸ್ತಾಪಿಸಲು ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಗಳಿವೆ.
ಭಾರಿ ಮಳೆಯಿಂದ ಬೆಂಗಳೂರು, ರಾಮನಗರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಹಾನಿ ಹಾಗೂ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ಇತ್ತೀಚೆಗೆ ನಡೆದ ಕರಾವಳಿ ಭಾಗದ ಹತ್ಯೆ ಪ್ರಕರಣಗಳು, ಪ್ರವಾಹ ಹಾಗೂ ಅತಿವೃಷ್ಟಿಯಿಂದ ಉಂಟಾದ ಸಮಸ್ಯೆ ಪರಿಹಾರದಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಪ್ರಸ್ತಾಪಿಸಲು ಉದ್ದೇಶಿಸಲಾಗಿದೆ.
ಮಳೆ ಹಾನಿಗೆ ಸೂಕ್ತ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ. ಅಲ್ಲದೆ, ಬಿಬಿಎಂಪಿ ಸೇರಿದಂತೆ ಮುಂಬರುವ ಚುನಾವಣೆಗಳ ಸಿದ್ಧತೆ, ಪಂಚರತ್ನ ಕಾರ್ಯಕ್ರಮದ ಆರಂಭ, ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸೆ. 12ರಿಂದ ವಿಧಾನಮಂಡಲ ಅಧಿವೇಶನ, ಹುತಾತ್ಮ ಯೋಧರ ಕುಟುಂಬಕ್ಕೆ ಅನುಕಂಪದ ನೌಕರಿಗೆ ಒಪ್ಪಿಗೆ