ಹಾಸನ: ಜೆಡಿಎಸ್ ಭದ್ರಕೋಟೆ ಹಾಸನ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿ ನಡೆಯುತ್ತಿದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪಕ್ಷ ತೀರ್ಮಾನಿಸಿದ್ರೆ ಹಾಸನದಿಂದ ನಾನೇ ಸ್ಪರ್ಧಿಸ್ತೀನಿ ಅಂತಾರೆ. ಶಾಸಕ ಪ್ರೀತಂ ಗೌಡ ಕೂಡಾ ಸವಾಲ್ ಹಾಕಿ ತೊಡೆ ತಟ್ಟಿ ನಿಂತಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲ ಪಟ್ಟಿ ಬಿಡುಗಡೆ ಮಾಡಿದರೂ ಹಾಸನ ಕ್ಷೇತ್ರದ ಯಾವುದೇ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಕ್ಷೇತ್ರದಲ್ಲಿ ಸ್ಪರ್ಧಿಸಲು ಭವಾನಿ ರೇವಣ್ಣ, ಹೆಚ್.ಪಿ.ಸ್ವರೂಪ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಶಿವಲಿಂಗೇ ಗೌಡ ಕೈ ಪಕ್ಷ ಸೇರ್ತಾರಾ?: ಅರಸೀಕೆರೆಯಲ್ಲಿ ಕೆ.ಎಂ.ಶಿವಲಿಂಗೇಗೌಡರು ಕಾಂಗ್ರೆಸ್ ಪಕ್ಷ ಸೇರ್ತಾರೆ ಅನ್ನೂ ಕೂಗು ಜೋರಾಗಿದೆ. ಆದ್ರೆ ಬಹಿರಂಗವಾಗಿ ಘೋಷಣೆ ಮಾಡಿಲ್ಲ. ಜೆಡಿಎಸ್ನಿಂದ ಶಿವಲಿಂಗೇಗೌಡರಿಗೆ ಈ ತಿಂಗಳ 12ರ ತನಕ ಗಡುವು ಕೊಟ್ಟಿದ್ದು, ತದನಂತರ ಕೆಎಂಶಿ ಜೆಡಿಎಸ್‌ನಲ್ಲಿ ಉಳೀತಾರೋ ಅಥವಾ ಕಾಂಗ್ರೆಸ್‌ಗೆ ಹಾರ್ತಾರೋ ಅನ್ನೋದನ್ನ 12ರ ನಂತರ ಕಾದು ನೋಡ್ಬೇಕಿದೆ.
ಹೊಳೆನರಸೀಪುರದ ಕಾರ್ಯಕ್ರಮವೊಂದರಲ್ಲಿ ಹಾಸನದಿಂದ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಇದರಿಂದ 'ತೆನೆ'ಮನೆಯಲ್ಲಿ ಕುಟುಂಬ ಮುನಿಸು ತಾರಕಕ್ಕೇರಿತ್ತು. ರೇವಣ್ಣ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಮ್ಮನಿಗೆ ಸಪೋರ್ಟಿವ್ ಹೇಳಿಕೆ ಕೂಡ ಕೊಟ್ಟಿದ್ದರು.
ಆದ್ರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಾಸನದಲ್ಲಿ ಭವಾನಿ ರೇವಣ್ಣ ಅವರ ಅನಿವಾರ್ಯತೆ ಇಲ್ಲ. ಅದಕ್ಕೆ ಸೂಕ್ತ ಅಭ್ಯರ್ಥಿ ಇದ್ದಾರೆ ಎಂದಿದ್ದರು. ಹಾಸನದಲ್ಲಿ ಬೇರೆ ಅಭ್ಯರ್ಥಿ ಇದ್ದಾರೆ ಅನ್ನೋ ಹೇಳಿಕೆ ನೀಡಿದ್ದೇ ತಡ, ಕ್ಷೇತ್ರದಲ್ಲಿ ದಿ.ಹೆಚ್.ಎಸ್.ಪ್ರಕಾಶ್ ಪುತ್ರ ಹೆಚ್.ಪಿ.ಸ್ವರೂಪ್ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.
ನಗರದ ಸಂಸದರ ಭವನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷ ತೀರ್ಮಾನಿಸಿದ್ರೆ ಹಾಸನದಲ್ಲಿ ಸ್ಪರ್ಧಿಸಲು ಸಿದ್ಧ. 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆಯುವುದಾಗಿ ಹೇಳಿಕೆ ನೀಡಿರುವ ಪ್ರೀತಂ ಗೌಡರ ಸವಾಲನ್ನು ಸ್ವೀಕರಿಸುವೆ ಎಂದಿದ್ದಾರೆ. ಹಾಸನ ಕ್ಷೇತ್ರದ ಶಾಸಕರು ನನಗೆ ಚಾಲೆಂಜ್ ಮಾಡಿದ್ದು, ನನ್ನನ್ನು 50 ಸಾವಿರ ಮತಗಳ ಅಂತರದಿಂದ ಸೋಲಿಸುತ್ತೇನೆ ಎಂದಿದ್ದಾರೆ. ಪಕ್ಷ ತೀರ್ಮಾನಿಸಿದ್ರೆ ನಾನು ಹಾಸನ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಅರಕಲಗೂಡಿಗೆ ಜೆಡಿಎಸ್ ಅಭ್ಯರ್ಥಿ ಯಾರು?: ಮಾಜಿ ಸಚಿವ ಎ.ಮಂಜು ಪಕ್ಷಕ್ಕೆ ಬಂದಿದ್ದಾರೆ. ಆದ್ರೆ ಅರಕಲಗೂಡಿನಿಂದ ಅವರೇ ಅಭ್ಯರ್ಥಿ ಅಂತಾ ಘೋಷಣೆಯಾಗಿಲ್ಲ. ಈ ಬಾರಿ 7 ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಪಾರ್ಲಿಮೆಂಟ್ ಬೋರ್ಡ್‌ನಲ್ಲಿ ತೀರ್ಮಾನ ಮಾಡುತ್ತಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಗ್ಯ ಲೆಕ್ಕಿಸದೇ ಕಳೆದ 68 ದಿನಗಳಿಂದ ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಮಾತು ಕೊಟ್ಟಂತೆ ನಡೆದುಕೊಳ್ಳುವ ನಾಯಕ ಎಂದು ರೇವಣ್ಣ ಹೇಳಿದರು.
ಪಕ್ಷದ ಮುಖಂಡರು ತೀರ್ಮಾನ ಮಾಡುವವರೆಗೂ ನಾನು ಉತ್ತರ ನೀಡೋಲ್ಲ. ಫೆಬ್ರವರಿ 12 ರಂದು ಕುಮಾರಣ್ಣ ಮತ್ತು ಸ್ವಾಮೀಜಿ ಬರಲಿದ್ದು, ನಂತರ ತೀರ್ಮಾನ ಮಾಡಲಾಗುವುದು. ಪ್ರತಿ ತಾಲೂಕಿನಲ್ಲೂ ಜನರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಲು ಸಿದ್ಧ. ಪಕ್ಷದ ತೀರ್ಮಾನವೇ ಅಂತಿಮ. ಅಲ್ಲಿಯೂ ಅವಕಾಶ ಕೊಡದಿದ್ದರೆ ಕಾರ್ಯಕರ್ತನಾಗಿ ಓಡಾಡುವೆ ಎಂದು ತಿಳಿಸಿದ್ದರು.
ಇದನ್ನೂಓದಿ: ಸಾಹುಕಾರ್ನಾದರು ಇಟ್ಟುಕೊಳ್ಳಲಿ, ಸಾವರ್ಕರ್ನಾದರೂ ಇಟ್ಟುಕೊಳ್ಳಲಿ: ಕಟೀಲ್ ವಿರುದ್ಧ ಡಿಕೆಶಿ ವಾಗ್ದಾಳಿ