ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು ಪ್ರಯಾಣ ಬೆಳೆಸಲಿದೆ. ಜನವರಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಿ ಚುನಾವಣಾ ರಣಕಹಳೆ ಮೊಳಗಿಸುವರು. ರಾಷ್ಟ್ರೀಯ ನಾಯಕರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸಿದ್ಧತೆಗಳು ಚುರುಕುಗೊಂಡಿವೆ.
ಜನವರಿಯಲ್ಲಿ ನಡೆಯುವ ಮೂರು ಪ್ರಮುಖ ಸಮಾವೇಶಗಳಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ನಾಯಕರ ಸಮಾವೇಶಗಳಿಗೆ ಬೃಹತ್ ಪ್ರಮಾಣದಲ್ಲಿ ಜನರನ್ನು ಸೇರಿಸಿ ಯಶಸ್ವಿಗೊಳಿಸಲು ಪ್ಲಾನ್ ರೂಪಿಸಲಾಗುತ್ತಿದೆ. ಸಮಾವೇಶಗಳಲ್ಲಿ 5 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಸಚಿವರಿಗೆ ಮತ್ತು ಶಾಸಕರಿಗೆ ಕ್ಷೇತ್ರವಾರು ಗುರಿ ಕೊಡಲಾಗಿದೆ. ಮೋದಿ ಸಮಾವೇಶಕ್ಕೆ 7 ಲಕ್ಷ ಜನರನ್ನು ಸೇರಿಸಲು ಮುಂದಾಗಿರುವ ಬಿಜೆಪಿ, ಪ್ರಮುಖರ ತಂಡಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿದೆ.
ಜ.12 ರಂದು ಪ್ರಧಾನಿ ಮೋದಿ ಭೇಟಿ: ಜನವರಿ 12ಕ್ಕೆ ಐಐಟಿ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲೂ ಭಾಗವಹಿಸಲಿರುವ ಅವರು, ಅದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಿಗೂ ಚಾಲನೆ ಕೊಡಲಿದ್ದಾರೆ.
ಯುಪಿ ಸಿಎಂ ಯೋಗಿ ಆಗಮನ: ಜನವರಿ ಮೂರನೇ ವಾರದಲ್ಲಿ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಹ ಆಗಮಿಸಲಿದ್ದಾರೆ. ಉಡುಪಿಯಲ್ಲಿ ಜನವರಿ 23 ಕ್ಕೆ ಬಿಜೆಪಿಯಿಂದ ಬೃಹತ್ ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶ ಉದ್ಘಾಟಿಸಿ ಅವರು ಭಾಷಣ ಮಾಡಲಿದ್ದಾರೆ.
ಅಮಿತ್ ಶಾ ಎಂಟ್ರಿ: ಜನವರಿಯಲ್ಲೇ ರಾಜ್ಯಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಕೂಡ ಆಗಮಿಸಲಿದ್ದು ಚಿತ್ರದುರ್ಗದಲ್ಲಿ ಎಸ್ಸಿ ಸಮುದಾಯದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಅವರು ಭಾಗವಹಿಸುವರು. ಇನ್ನಷ್ಟೇ ದಿನಾಂಕ ನಿಗದಿ ಆಗಬೇಕಿದೆ.
ಇದನ್ನೂ ಓದಿ:ಉಪನ್ಯಾಸಕರ ಮಧ್ಯಂತರ ವರ್ಗಾವಣೆ ಸ್ಥಗಿತಗೊಳಿಸಿ: ಸಿದ್ದರಾಮಯ್ಯ ಒತ್ತಾಯ