ಬೆಂಗಳೂರು: ಬಾಡಿಗೆ ತಾಯಿಯಾಗಲು ಗರ್ಭವತಿಯಾಗಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳು ಸಂಘಟನೆಯ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟು ವಿಕೃತವಾಗಿ ವರ್ತಿಸಿ ಹಲ್ಲೆ ನಡೆಸಿದ ಪರಿಣಾಮ ಆಕೆ ಗರ್ಭಪಾತಕ್ಕೆ ಗುರಿಯಾಗಿರುವ ಅಮಾನುಷ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮೈಕೋ ಲೇಔಟ್‌ನ ನಿವಾಸಿ 27 ವರ್ಷದ ಮಹಿಳೆ ಗರ್ಭಪಾತಕ್ಕೊಳಗಾದ ಸಂತ್ರಸ್ತೆ. ಆರೋಪಿಗಳಾದ ಪೂಜಾ, ಮಂಜುನಾಥ್, ಪ್ರೇಮಾ, ಆಶಾ, ರೀಟಾ ಹಾಗೂ ಪ್ರಮೀಳಾ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬೇಗೂರು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ , ಖಾಸಗಿ ಸೆಂಟರ್ ವೊಂದರ ಮೂಲಕ ಬಾಡಿಗೆ ತಾಯ್ತನದ ಸೇವೆಗೆ ಮುಂದಾಗಿದ್ದರು. ಮದುರೀಮನಾಗ್ ಮತ್ತು ದೀಪಾಂಜನಾಗ್ ದಂಪತಿಯಿಂದ ಪ್ರನಾಳ ಶಿಶು ವಿಧಾನದಲ್ಲಿ ಗರ್ಭಧರಿಸಿ 4 ತಿಂಗಳಾಗಿತ್ತು. ಗರ್ಭಿಣಿಯನ್ನು ನ್ಯೂ ಮೈಕೋ ಲೇಔಟ್‌ನ ಕೃಷ್ಣ ಬೇಕರಿ ಸಮೀಪದ ಅತಿಥಿಗೃಹ (ಪಿಜಿ)ಯಲ್ಲಿಟ್ಟು ಪೋಷಣೆ ಮಾಡುತ್ತಿದ್ದರು.
ಬಾಡಿಗೆ ತಾಯ್ತನದ ವಿಚಾರ ತಿಳಿದಿದ್ದ ಪೂಜಾ, ಮಂಜುನಾಥ್, ಪ್ರೇಮಾ, ಆಶಾ, ರೀಟಾ ಹಾಗೂ ಪ್ರಮೀಳಾ ಎಂಬುವರು, ಗರ್ಭಿಣಿ ನೆಲೆಸಿದ್ದ ಪಿ.ಜಿ ಗೆ ಹೋಗಿದ್ದಾರೆ. ಬೊಮ್ಮನಹಳ್ಳಿಯ ಸ್ವಾತಿ ಮಹಿಳಾ ಸಂಘಟನೆಯವರು ಎಂದು ಹೇಳಿ, ಬಾಡಿಗೆ ತಾಯ್ತನಕ್ಕೆ ಪಡೆಯುತ್ತಿರುವ ಹಣದಲ್ಲಿ ಪಾಲು ಕೊಡುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಗರ್ಭಿಣಿ ನಿರಾಕರಿಸಿದಾಗ ಮತ್ತೆ ವಿಚಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ.
![Assault on pregnant woman](https://etvbharatimages.akamaized.net/etvbharat/prod-images/6421726_thumb.jpg)
ಮಾ.11ರಂದು ಬೆಳಗ್ಗೆ 10 ಗಂಟೆಗೆ ಮತ್ತೆ ಪಿಜಿಗೆ ಬಂದ ಆರೋಪಿಗಳು, ಮಾಮೂಲಿ ಕೊಡುವಂತೆ ಹೇಳಿದ್ದೇವಲ್ಲ? ಇಷ್ಟು ದಿನವಾದರೂ ಯಾಕೆ ಕೊಟ್ಟಿಲ್ಲ?’ ಎಂದು ಕೇಳಿದ್ದಾರೆ. ಬಳಿಕ ಆಕೆಯ ಕೂದಲನ್ನು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಆಕೆಯ ಮೇಲಿನ ಹಲ್ಲೆ ತಡೆಯಲು ಮುಂದಾದ ಪಿಜಿ ಮುಖ್ಯಸ್ಥೆ ಹಾಗೂ ಇತರೆ ಯುವತಿಯರಿಗೂ ಥಳಿಸಿದ್ದಾರೆ.
ಹಲ್ಲೆಯಿಂದ ಗರ್ಭಿಣಿಗೆ ರಕ್ತಸ್ರಾವವಾಗಿದ್ದು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಪಿಜಿಯಲ್ಲಿದ್ದ ಯುವತಿಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಗರ್ಭಪಾತ ಆಗಿರುವುದನ್ನು ದೃಢಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದಾರೆ.